ಮೌಲ್ಯಯುತ ಶಿಕ್ಷಣ ಎಲ್ಲರ ಸ್ವತ್ತಾಗಬೇಕು : ಎಂ.ಎ. ರಡ್ಡೇರ

0
Preparatory Meeting for Head Teachers on School Commencement Ceremony for the academic year 2024-25
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮೌಲ್ಯಯುತ ಶಿಕ್ಷಣ ಪ್ರತಿಯೊಬ್ಬರ ಸ್ವತ್ತಾಗಬೇಕು. ಮಗುವಿಗೆ ತಂದೆ-ತಾಯಿ ಭೌತಿಕವಾಗಿ ಜನ್ಮ ನೀಡಿದರೆ, ಶಿಕ್ಷಣವು ಬೌದ್ಧಿಕ ಅಸ್ಮಿತೆ, ಅಸ್ತಿತ್ವ ನೀಡುತ್ತದೆ. ಅಂತಹ ಶಿಕ್ಷಣ ಉಳ್ಳವರ ಸ್ವತ್ತಾಗಬಾರದು ಎಂದು ಶಾಲಾ ಶಿಕ್ಷಣ ಇಲಾಖೆಯ ಗದಗ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಅಭಿಪ್ರಾಯಪಟ್ಟರು.

Advertisement

ಅವರು ಪಟ್ಟಣದ ಎಸ್‌ಟಿಪಿಬಿಎಂಬಿ ಸಭಾಭವನದಲ್ಲಿ ಹಮ್ಮಿಕೊಂಡ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಕುರಿತು ಮುಖ್ಯ ಶಿಕ್ಷಕರಿಗಾಗಿ ಪೂರ್ವಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಶೈಕ್ಷಣಿಕ ಬಲವರ್ಧನೆಗಾಗಿ 5 ಅಂಶಗಳ ಕಾರ್ಯಕ್ರಮಕ್ಕೆ ಒತ್ತು ನೀಡಲು ಯೋಜಿಸಲಾಗಿದೆ. ಶಾಲಾ ಸ್ವಚ್ಛತೆ ಹಾಗೂ ನೈರ್ಮಲೀಕರಣ, ದಾಖಲಾತಿ ಹೆಚ್ಚಿಸಲು ಆಂದೋಲನ, ಪರಿಣಾಮಕಾರಿ ಸೇತುಬಂಧ ಇಲಾಖೆಯ ಪ್ರೋತ್ಸಾಹಕ ಯೋಜನೆಗಳ ಸಮಗ್ರ ಪರಿಚಯ, ಸಸ್ಯ ಶ್ಯಾಮಲ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಮಾತನಾಡಿ, ಬ್ಲಾಕ್‌ನ ಮೊದಲ ಬಿಇಓ ಆಗಿ ಬಂದ ನನಗೆ ತಾವೆಲ್ಲ ನೀಡಿದ ಸಹಕಾರ ಮರೆಯಲಾರೆ ಎಂದು ಧನ್ಯವಾದ ತಿಳಿಸಿದರು. ಇದೇ ಸಂದರ್ಭದಲ್ಲಿ ಡಿಡಿಪಿಐ ಹಾಗೂ ಇಬ್ಬರು ಬಿಇಓಗಳನ್ನು ಸನ್ಮಾನಿಸಲಾಯಿತು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್. ರಾಮನಗೌಡ್ರ, ಇ.ಸಿ.ಓ ಹರೀಶ ಎಸ್, ಪ್ರೌಢವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ, ಬಿ.ಆರ್.ಪಿ ಬಸವರಾಜ ಯರಗುಪ್ಪಿ ವಿವಿಧ ಕಾರ್ಯಾಯೋಜನೆಗಳನ್ನು ಮಂಡಿಸಿದರು.

ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಎಸ್‌ಟಿಪಿಎಂಬಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಯ್.ಬಿ. ಜಕ್ಕನಗೌಡ್ರ, ಗೊಜನೂರ ಶಾಲೆಯ ಮುಖ್ಯ ಶಿಕ್ಷಕ ಬಿ.ಎಚ್. ನಡುವಿನಮನಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಬಿ.ಎಂ. ಕುಂಬಾರ ಸ್ವಾಗತಿಸಿದರು. ಸಿ.ಆರ್.ಪಿಗಳಾದ ಜ್ಯೋತಿ ಗಾಯಕವಾಡ ಹಾಗೂ ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಉಮೇಶ ನೇಕಾರ ನಿರೂಪಿಸಿದರು. ಸತೀಶ ಬೋಮಲೆ ವಂದಿಸಿದರು. ಲಕ್ಷ್ಮೇಶ್ವರ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.

ನೂತನವಾಗಿ ಶಿರಹಟ್ಟಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಎನ್. ನಾಯಕ ಮಾತನಾಡಿ, ತಾಲೂಕಿನ ಶಾಲೆ, ಶಿಕ್ಷಣದ ಅಭಿವೃದ್ಧಿಗಾಗಿ ಹಲವಾರು ಕನಸು ಹೊಂದಿದ್ದು, ಅವುಗಳ ಸಾಕಾರಕ್ಕಾಗಿ ತಮ್ಮೆಲ್ಲರ ಸಹಕಾರ ಕೋರುತ್ತೇನೆ. ಎಲ್ಲರೂ ಸೇರಿ ಕ್ಷೇತ್ರದ ಶೈಕ್ಷಣಿಕ ಸಾಧನೆಗಾಗಿ ಬದ್ಧರಾಗೋಣ ಎಂದರು.


Spread the love

LEAVE A REPLY

Please enter your comment!
Please enter your name here