ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು. ಜಗತ್ತು ಮುನ್ನಡೆಯುವುದು ಮಕ್ಕಳ ಪ್ರಗತಿಯ ಹೆಜ್ಜೆಯ ಮೇಲೆ. ಅವರಿಗೆ ಅಗತ್ಯವಾದ ಅಕ್ಕರೆ, ಅನ್ನ ಹಾಗೂ ಅಕ್ಷರ ಈ ಮೂರನ್ನು ಸಮರ್ಪಕವಾಗಿ ನೀಡುವುದು ಸರ್ವರ ಜವಾಬ್ದಾರಿಯಾಗಿದೆ ಎಂದು ಗದಗ ಜಿಲ್ಲಾ ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ ಹೇಳಿದರು.
ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಶಾಲೆಯಿಂದ ಹೊರಗುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳ ಶಿಕ್ಷಣಕ್ಕಾಗಿ ಇಲಾಖಾ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಹಾಗೂ ಬೆಂಬಲ ವ್ಯವಸ್ಥೆಯ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿನ ವ್ಯಕ್ತಿತ್ವ, ಪ್ರತಿಭೆ, ಮಾನಸಿಕ ಹಾಗೂ ಭೌತಿಕ ಸಾಮರ್ಥ್ಯಗಳನ್ನು ಪೂರ್ಣವಾಗಿ ಬೆಳೆಸುವಂತಹ ಶಿಕ್ಷಣವನ್ನು ಪಡೆಯುವ ಹಕ್ಕು ಪ್ರತಿಯೊಂದು ಮಗುವಿಗಿದೆ. ಹೀಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕಾಳಜಿ ವಹಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಯಟ್‌ನ ಹಿರಿಯ ಉಪನ್ಯಾಸಕ ಹೆಚ್.ಬಿ. ರಡ್ಡೆರ ಮಾತನಾಡಿ, ರಾಷ್ಟçದ ಸುಸ್ಥಿರ ಅಭಿವೃದ್ಧಿ, ವಯಕ್ತಿಕ ಪ್ರಗತಿ, ನಿಸರ್ಗ ಪೂರಕ ಜೀವನಕ್ಕೆ ಶಿಕ್ಷಣವೇ ತಳಹದಿಯಾಗಿರುವುದರಿಂದ ಯಾವ ಮಗುವೂ ಶಾಲೆಯಿಂದ ಹೊರಗಿದ್ದು, ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ನೈತಿಕ ಹಾಗೂ ವೃತ್ತಿಪರ ಮೂಲಭೂತ ಕರ್ತವ್ಯವಾಗಿದೆ ಎಂದರು.
ಡಯಟ್ ಉಪನ್ಯಾಸಕ ಕೆ.ಪಿ. ಸಾಲಿಮಠ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಪ್ರಾಥಮಿಕ ಶಿಕ್ಷಣದ ಮುಖ್ಯ ಜವಾಬ್ದಾರಿಯಾಗಿದೆ. ಶಾಲೆಗೆ ದಾಖಲಾಗುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿ ಅವರು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸುವಂತೆ ಮಾಡಬೇಕಾಗಿದೆ ಎಂದರು.
ಶರಣಬಸವ ಮೂಲಿಮನಿ ಪ್ರಾರ್ಥಿಸಿದರು. ಶಿವಕುಮಾರ ಕುರಿ ಸ್ವಾಗತಿಸಿದರು, ಗೋಪಾಲ ದಾಸರ ನಿರೂಪಿಸಿದರು, ರಘುವೀರ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಎ.ಪಿ.ಸಿ.ಓ ಶ್ರೀಧರ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ಮೇಲ್ವಿಚಾರಣಾಧಿಕಾರಿಗಳು ಹಾಜರಿದ್ದರು.