ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ, 46 ಲಕ್ಷ ನಗದು ಹಣ ಹಾಗೂ ಕಾರು ಸಮೇತ ದರೋಡೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಗಂಗಾವತಿ ಮೂಲದ ವಿಜಯ್ ಎನ್ ಅಣ್ವೆರ‍್ರವರು ಗೋಲ್ಡ್ ಟೆಸ್ಟಿಂಗ್ ಕೆಲಸದ ನಿಮಿತ್ತ ಕಾರಿನಲ್ಲಿ ಹರಪನಹಳ್ಳಿ ಮಾರ್ಗವಾಗಿ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ತಾಲೂಕಿನ ಕಂಭಟ್ರಹಳ್ಳಿಯ ಬಳಿ ಇರುವ ಸಬ್ ಜೈಲ್ ಹತ್ತಿರ, ಮಧ್ಯರಾತ್ರಿ 1.30ರ ಸಮಯದಲ್ಲಿ ಹಿಂಬದಿಯಿಂದ ಅಟ್ಟಿಸಿಕೊಂಡು ವೇಗವಾಗಿ ಬಂದ ಇನ್ನೊಂದು ಕಾರು, ಮುಂದೆ ಚಲಿಸುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ 46 ಲಕ್ಷ ರೂ ನಗದು, 20 ಸಾವಿರ ಮೂಲ್ಯದ ಎರಡು ಮೊಬೈಲ್, 14 ಲಕ್ಷ ಮೌಲ್ಯದ ಕಾರು ಸಮೇತ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಲ್. ಹರಿಶ್ ಬಾಬು ಹಾಗೂ ಹರಪನಹಳ್ಳಿ ಉಪವಿಭಾಗದ ಡಿವೈಎಸ್‌ಪಿ ತನಿಖಾಧಿಕಾರಿಗಳ ತಂಡ ಪ್ರಕರಣದಲ್ಲಿ ಭಾಗಿಯಿದ್ದ 6 ಜನ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಗೆ ಸಂಚು ರೂಪಿಸಲು ಸಹಕರಿಸಿದ ರವಿ (ಬಾದಶಾ) ಲಿಂಗರಾಜ ಕ್ಯಾಂಪ್ ಗಂಗಾವತಿ, ವಿ ಸುನೀಲ್ ಪ್ರಶಾಂತ್ ನಗರ ಗಂಗಾವತಿ, ರಾಜಾಹುಸೇನ್ ಬಳ್ಳಾರಪ್ಪ ಕಾಲೋನಿ ಬಳ್ಳಾರಿ ಈ ಮೂವರನ್ನು ಪತ್ತೆಹಚ್ಚಲಾಗಿದೆ.
ಬಂಧಿತರಿಂದ ದರೋಡೆ ಮಾಡಿದ್ದ 10,33,000 ರೂ ಹಣ, 20 ಸಾವಿರ ಬೆಲೆಬಾಳುವ 2 ಮೊಬೈಲ್ ಹಾಗೂ 14 ಲಕ್ಷ ರೂ ಬೆಲೆಬಾಳುವ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.