ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದರೆ ಗಡಿಪಾರು ಮಾಡಿ

0
District Taskforce (Mines) Committee meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಗಣಿಗಾರಿಕೆಯನ್ನು ಸರ್ಕಾರದ ನಿಯಮಾನುಸಾರ ಸರಿಯಾಗಿ ನಿರ್ವಹಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುವರನ್ನು ಗುರುತಿಸಿ ಗಡಿಪಾರು ಶಿಕ್ಷೆಗೆ ಒಳಪಡಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ಫೋರ್ಸ್ (ಗಣಿ) ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಮತ್ತು ಲೈಸನ್ಸಿಂಗ್ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಾ ತಹಸೀಲ್ದಾರರು ತಮಗಿರುವ ದಂಡಾಧಿಕಾರಿ ಅಧಿಕಾರವನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಅಧಿಕ ಪ್ರಮಾಣದ ದಂಡ ವಿಧಿಸಲು ಅವಕಾಶವಿದ್ದು, ಅದನ್ನು ಚಲಾಯಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುವವರನ್ನು ಸರಿದಾರಿಗೆ ತರಬೇಕು. ದಂಡ ವಿಧಿಸಿದ ನಂತರ ಅದನ್ನು ಸಂಬಂಧಿಸಿದ ವ್ಯಕ್ತಿಯ ಖಾತೆಯಲ್ಲಿ ಭೋಜಾ ದಾಖಲಿಸಬೇಕು. ಪದೇ ಪದೇ ತಪ್ಪೆಸಗಿದಲ್ಲಿ ಅವರನ್ನು ಗಡಿಪಾರಿಗೆ ಶಿಕ್ಷೆಗೆ ಒಳಪಡಿಸಲು ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ವಯ ಗಣಿಗಾರಿಕೆ ಮಾಡುವವರಿಗೆ ಅವಕಾಶ ನೀಡಬೇಕು. ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ತಪ್ಪಿದ್ದಲ್ಲ ಎಂಬುದನ್ನು ಮನವರಿಕೆ ಮಾಡಿಸುವ ಕಾರ್ಯ ಇಲಾಖಾಧಿಕಾರಿಗಳಿಂದ ಆಗಬೇಕು ಎಂದರು.

ಸಭೆಯಲ್ಲಿ ಹೊಳೆ, ನದಿಗಳ ಪಾತ್ರದಲ್ಲಿನ ಗುರುತಿಸಿರುವ ಮರಳು ಬ್ಲಾಕ್‌ಗಳನ್ನು ವಿಲೇವಾರಿ ಮಾಡುವ ಕುರಿತು, ಕಪ್ಪತಗುಡ್ಡ ವನ್ಯ ಜೀವಿ ಧಾಮದಿಂದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಬರುವ ಕ್ರಶರ್ ಘಟಕಗಳ ಲೈಸನ್ಸ್ಗಳನ್ನು ನಿಲಂಬನೆಗೊಳಿಸುವ ಕುರಿತು, ಕ್ರಶರ್ ಘಟಕಗಳ ಹೊಸದಾಗಿ ಮಂಜೂರು ಮಾಡುವ ಕುರಿತು, ಕಪ್ಪತಗುಡ್ಡ ವನ್ಯಜೀವಿ ಧಾಮದಿಂದ ಹತ್ತು ಕಿ.ಮೀ ವ್ಯಾಪ್ತಿಯಲ್ಲಿರುವ ಕಟ್ಟಡ ಕಲ್ಲು, ಮರಳು, ಮಣ್ಣು ಗಣಿಗಾರಿಕೆ ಮತ್ತು ಕ್ರಶರ್ ಘಟಕಗಳ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಹಾಗೂ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯೊಳಗೆ ಕಲ್ಲು ಗಣಿ ಪರವಾನಿಗೆ ಹೊಸ ಅರ್ಜಿ ಕುರಿತಂತೆ ಚರ್ಚಿಸಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಿದಂಬರಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಹಾಜರಿದ್ದರು.

ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಮಗಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಅಕ್ರಮ ಮರಳು, ಕಲ್ಲು ಗಣಿಗಾರಿಕೆ ತಡೆಗೆ ಮುಂದಾಗಬೇಕು. ಈ ಮೂಲಕ ಸಾರ್ವಜನಿಕ ಆಸ್ತಿ ಸಂರಕ್ಷಣೆ ಮಾಡಬೇಕು ಹಾಗೂ ಸಾರ್ವಜನಿಕರ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಅಕ್ರಮ ಗಣಿಗಾರಿಕೆ ಕುರಿತು ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಂಬಂಧಿತ ಇಲಾಖೆಯ ಅಧಿಕಾರಿಗಳು ನೈಜತೆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ವಹಿಸುವಂತೆ ಡಿಸಿ ವೈಶಾಲಿ ಎಂ.ಎಲ್ ಹೇಳಿದರು.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರ ಮೇಲೆ ನಿರಂತರ ನಿಗಾ ವಹಿಸಬೇಕು. ವಾಹನಗಳ ತಪಾಸಣೆಯನ್ನು ನಿಯಮಿತವಾಗಿ ಸಾರಿಗೆ ಅಧಿಕಾರಿಗಳು ಮಾಡಬೇಕು. ಓವರ್ ಲೋಡ್ ವಾಹನಗಳಿಗೆ ನಿಯಮಾನುಸಾರ ದಂಡ ವಿಧಿಸುವ ಮೂಲಕ ಪ್ರಕರಣ ದಾಖಲಿಸಬೇಕು. ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ, ಸ್ಥಳ ಪರಿಶೀಲನೆಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ.
– ಬಿ.ಎಸ್. ನೇಮಗೌಡ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

 


Spread the love

LEAVE A REPLY

Please enter your comment!
Please enter your name here