HomeDharwadಮಳೆಗಾಲದ ನಂತರ ದುರಸ್ತಿ ಕಾರ್ಯ

ಮಳೆಗಾಲದ ನಂತರ ದುರಸ್ತಿ ಕಾರ್ಯ

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : 2019ರಲ್ಲಿ ಸರಕಾರ ಒದಗಿಸಿದ ಅನುದಾನದಲ್ಲಿ ಹೂಳು ತೆಗೆಯುವುದು, ಬದು ಎತ್ತರಿಸುವುದು ಹಾಗೂ ತಡೆಗೋಡೆ ಕಾಮಗಾರಿಗಳನ್ನು ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.

ಆದರೂ ಸಹ ನೀರು ಗ್ರಾಮಗಳಿಗೆ ಹಾಗೂ ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗುತ್ತಿದೆ.

ವೈಜ್ಞಾನಿಕವಾಗಿ ಮೇಲ್ಸೇತುವೆ ಎತ್ತರಿಸುವುದು ಹಾಗೂ ಹಲವೆಡೆ ಬ್ಯಾರೇಜ್‌ಗಳನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ಜನರಿಗೆ, ರೈತರಿಗೆ ತೊಂದರೆ ಆಗದಂತೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಮಳೆಗಾಲದ ನಂತರ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಸಚಿವ ಸಂತೋಷ ಲಾಡ್ ತಿಳಿಸಿದರು.

ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ನವಲಗುಂದ ತಾಲೂಕಿನಲ್ಲಿ ತುಪ್ಪರಿ ಹಳ್ಳ ಹಾಗೂ ಬೆಣ್ಣಿ ಹಳ್ಳದ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಾದ ಹನಸಿ, ಶಿರಕೋಳ, ಬಳ್ಳೂರ ಗ್ರಾಮಗಳಿಗೆ ಸಚಿವರಾದ ಸಂತೋಷ ಲಾಡ್, ಶಾಸಕರಾದ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವೈಜ್ಞಾನಿಕ ಹಾಗೂ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು. ತಾಂತ್ರಿಕತೆ ಅರಿತು ಟೆಂಡರ್ ಕರೆಯುವುದು ಸೂಕ್ತವೆಂದರಲ್ಲದೆ, ತುಪ್ಪರಿಹಳ್ಳ 65 ಹಾಗೂ ಬೆಣ್ಣಿಹಳ್ಳ 140 ಕಿ.ಮೀ. ಹರಿದಿದೆ. ಹಳ್ಳದಗುಂಟ ಹಾನಿ ಮಾಡುತ್ತಿವೆ. ಈ ಉಭಯ ಹಳ್ಳಗಳಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಿ ಸದ್ಬಳಕೆಗೆ ಯೋಜನೆ ರೂಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Minister Santhosh Lad viewed the flood damaged area

ಇನಾಮಹೊಂಗಲ್, ಹನಸಿ ಹಾಗೂ ಶಿರಕೋಳ, ಬಳ್ಳೂರ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಹನಸಿ ಗ್ರಾಮದಲ್ಲಿ ಲಲಿತಾ ಗಂಗಪ್ಪ ಹೆಬ್ಬಳ್ಳಿ, ಗುರಪಾದಪ್ಪ ರುದ್ರಪ್ಪ ಆಯೆಟ್ಟಿ ಹಾಗೂ ಬಸವರಾಜ ಚಂದ್ರಶೇಖರ ಇಂಡಿ ಇವರ ಮನೆಗಳು ಹಾನಿಯನ್ನು ಪರಿಶೀಲಿಸಿ ಶೀಘ್ರವೇ ಮನೆಹಾನಿ ಪರಿಹಾರ ಒದಗಿಸಲಾಗುವುದೆಂದು ಭರವಸೆ ನೀಡಿದರು.

ಹನಸಿ ಹಾಗೂ ಶಿರಕೋಳ ಮಧ್ಯದಲ್ಲಿ ತುಪ್ಪರಿ ಹಳ್ಳ ಹರಿವಿನ ತೀವ್ರತೆ ಹಾಗೂ ಹಾನಿಗೀಡಾದ ಪ್ರದೇಶವನ್ನು ಸಚಿವರು ವೀಕ್ಷಿಸಿದರು. ಬಳ್ಳೂರ ಗ್ರಾಮದಲ್ಲಿ ಮಳೆಹಾನಿಗೊಳಗಾದ ವಾಸುದೇವ ಬೆಳ್ಳಿಕಟ್ಟಿ ಹಾಗೂ ರೇಣ್ಣಪ್ಪ ಕುಂಬಾರ ಮನೆಗಳಿಗೆ ಭೇಟಿ ನೀಡಿದರು. ತಿರ್ಲಾಪುರ ಗ್ರಾಮದಿಂದ ಅಳಗವಾಡಿ ಗ್ರಾಮದ ಮದ್ಯ ತುಪ್ಪರಿ ಹಳ್ಳವು ಬೆಣ್ಣೆ ಹಳಕ್ಕೆ ಕೂಡುವ ಸ್ಥಾಳವನ್ನು ಸೇತುವೆ ಮೇಲಿಂದ ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ತುಪ್ಪರಿಹಳ್ಳಕ್ಕೆ 315 ಕೋಟಿ ರೂ. ಮಂಜೂರಾಗಿದೆ. ಮೊದಲ ಹಂತದಲ್ಲಿ 150 ಕೋಟಿ ರೂ ಟೆಂಡರ್ ಆಗಿದ್ದು, ದ್ವಿತೀಯ ಹಂತದಲ್ಲಿ 110 ಕೋಟಿ ರೂ ಟೆಂಡರ್ ಆಗಬೇಕಿದೆ ಎಂದರು.

ಉಪ್ಪಿನಬೆಟಗೇರಿಯಿಂದ ಪ್ರಾರಂಭವಾಗುವ ಬೆಣ್ಣೆಹಳ್ಳ ನವಲಗುಂದವರೆಗೆ ಹರಿಯಲಿದೆ. ಈ ನೀರು ನೀರಾವರಿ ಬಳಕೆಗೆ ಯೋಜನೆ ರೂಪಿಸಲಿದೆ. ಈ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಬಾಗಲಕೋಟಿ, ಹಾವೇರಿ, ಧಾರವಾಡ ಜಿಲ್ಲೆಗಳು ಒಳಗೊಳ್ಳುವ ಈ ಬೆಣ್ಣೆಹಳ್ಳ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ನೀರಾವರಿಗೆ ಒಳಪಡಿಸುವಂತೆ ಘೋಷಿಸಿದ್ದು, ಎಸ್‌ಡಿಆರ್‌ಎಫ್‌ದಲ್ಲಿ 1,600 ಕೋಟಿಗೆ ಡಿಪಿಆರ್ ಆಗಿದೆ ಎಂದರು. ಅಲ್ಲದೇ, ನೀರು ಸಂಗ್ರಹಿಸಲು ಜಾಗದ ಕೊರತೆ ಇರುವ ಕಾರಣಕ್ಕೆ ಕೆರೆಗಳಿಗೆ ಈ ನೀರನ್ನು ತುಂಬಿಸಿ, ಪಂಪ್ ಮಾಡಿ ಬಳಸುವ ಯೋಜನೆ ರೂಪಿಸುವ ಕಾರ್ಯ ನಡೆದಿದೆ. ಇದು ಮೂರು ಹಂತದಲ್ಲಿ ಕಾರ್ಯ ಜರುಗಲಿದೆ ಎಂದು ತಿಳಿಸಿದರು. ಬೆಣ್ಣೆಹಳ್ಳದ ಜಮೀನು ಹಾನಿ ಸರ್ವೆ ಆಗಿಲ್ಲ. ಸದ್ಯ ಮಳೆಗಾಲ ಇದೆ. ಮಳೆಗಾಲದ ಬಳಿಕ ಸರ್ವೆ ಕಾರ್ಯ ನಡೆಯಲಿದೆ. ಬೆಣ್ಣೆಹಳ್ಳ ಅಗಲೀಕರಣ ಮಾಡಲು ಹಳ್ಳದ ಅಂಚಿನ ರೈತರು ಕೂಡ ಸಹಕಾರ ನೀಡಬೇಕಿದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!