HomeGadag Newsದೂರು ವಿಚಾರಣೆ, ಪ್ರಕರಣ ವಿಲೇವಾರಿ ಸಭೆ

ದೂರು ವಿಚಾರಣೆ, ಪ್ರಕರಣ ವಿಲೇವಾರಿ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು, ಕುಂದು-ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆ ಜರುಗಿತು.

ಭಾರತಿ ಯಮನೂರಪ್ಪ ಹೊಸಮನಿ ಅವರು ಕಳೆದ 5 ವರ್ಷಗಳಿಂದ ಶೌಚಾಲಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರೂ ಕೇವಲ 6 ತಿಂಗಳ ಗೌರವಧನ ಮಾತ್ರ ನೀಡಿದ್ದಾರೆ. ಬಾಕಿ ಗೌರವಧನ ವಿತರಣೆಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, 5 ವರ್ಷಗಳ ಕಾಲ ಶೌಚಾಲಯ ನಿರ್ವಹಣೆ ಮಾಡಿದ್ದರ ಕುರಿತು ದಾಖಲಾತಿ ಇದೆಯಾ ಎಂದು ಪ್ರಶ್ನಿಸಿದರು. ಆಗ ದೂರುದಾರರು ನಗರಸಭೆ ಸದಸ್ಯರಿಗೆ ಮಾಹಿತಿ ಇದೆ ಎಂದರು. ಆಗ ಉಪಲೋಕಾಯುಕ್ತರು ನಗರಸಭೆ ಸದಸ್ಯರ ದಾಖಲಾತಿ ಪರಿಗಣಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಕುರಿತು ದಾಖಲಾತಿ ನೀಡಿದ್ದರೆ ಪರಿಗಣಿಸಲಾಗುವುದು. ಆದರೂ, ನಗರಸಭೆ ಪೌರಾಯುಕ್ತರಿಗೆ ದಾಖಲಾತಿ ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.

ಸುಧಾಕರ ವೀರಾಪೂರ ಅವರು ಅಕ್ರಮ ನೇಮಕಾತಿ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು. ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪೌರಾಯುಕ್ತರಿಗೆ ಪರಿಶೀಲಿಸುವಂತೆ ಸೂಚಿಸಿದರು. ಮುಂಡರಗಿ ಮಂಜುನಾಥ ಕಟ್ಟಿಮನಿ ಅವರು ಸಿಂಧುತ್ವ ಪ್ರಮಾಣ ಪತ್ರ ವಿತರಣೆ ವಿಳಂಬ ಕುರಿತು ಅರ್ಜಿ ಸಲ್ಲಿಸಿದ್ದರು.

ಉಪಲೋಕಾಯುಕ್ತರು 4 ತಿಂಗಳು ವಿಳಂಬ ಯಾಕೆ ಎಂದು ತಹಸೀಲ್ದಾರರಿಗೆ ಪ್ರಶ್ನಿಸಿದರು. ಅವರ ದಾಖಲಾತಿ ಪ್ರಕಾರ ಅವರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿದೆ. ಅವರು ಬಯಸಿದ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದರು. ಈ ಕುರಿತು ಉಪ ಲೋಕಾಯುಕ್ತರು ದೂರುದಾರರಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ, ದಾಖಲಾತಿ ಪರಿಶೀಲಿಸಿ ಪೂರಕ ಪ್ರಮಾಣ ಪತ್ರ ನೀಡುತ್ತಾರೆ ಎಂದು ಹೇಳಿದರು.

Grievance Hearing Case Disposal Meeting

ರೋಣ ತಾಲೂಕಿನ ಕುರಡಗಿ ಗ್ರಾಮದ ಶೌಕತ್ ಅಲಿ ನರೇಗಲ್ ಅವರು ಕುರಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಪಲೋಕಾಯುಕ್ತರು ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಈ ವೇಳೆ ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ನಿಬಂಧಕರು ಅಮರನಾರಾಯಣ ಕೆ., ಉಪಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪಿಎಂ ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ ಸೇರಿ ಇತರೆ ಅಧಿಕಾರಿಗಳು ಇದ್ದರು.

ರೋಣ ತಾಲೂಕಿನ ಸವಡಿ ಗ್ರಾಮದ ಯಚ್ಚರಪ್ಪ ಹೂಗಾರ ಅವರು ತಮ್ಮ ಕುಟುಂಬಕ್ಕೆ ಸರಕಾರ ನೀಡಿದ್ದ ಮಂಜೂರಾತಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸುವಂತೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರು ನೀಡಿದ್ದರು. ಅದಕ್ಕೆ ಉಪಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರೋಣ ತಹಸೀಲ್ದಾರರಿಗೆ ಸೂಚನೆ ನೀಡಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!