ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸಂಘ ಮತ್ತು ಗಂಗಾಮತ ಸಮಾಜ ಬಾಂಧವರಿಂದ ಗಂಗಾಮಾತಾ ಜಯಂತ್ಯುತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ ಪಟ್ಟಣದ ಪುರಸಭೆ ಹತ್ತಿರದ ಸುಣಗಾರ ಓಣಿಯ ಗಂಗಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಬಳಿಕ ಗಂಗಾದೇವಿ ಭಾವಚಿತ್ರದ ಮೆರವಣಿಗೆ ಪೂರ್ಣಕುಂಭ ಮತ್ತು ವಾದ್ಯಗಳ ಸಮೇತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೆರವೇರಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗಾ ಮಾತೆ ಭೂಲೋಕದ ಸಕಲ ಚರಾಚರಗಳಿಗೂ ಆಶ್ರಯದಾತೆ ಮತ್ತು ಸಕಲ ಜೀವರಾಶಿಗಳಿಗೆ ಉಸಿರಾದ ದಿನವೆಂದು ಗಂಗಾಮಾತಾ ಜಯಂತಿ ಆಚರಿಸಲಾಗುತ್ತದೆ. ಪವಿತ್ರ ಗಂಗಾಮಾತೆ ಜೀವಿಗಳಿಗೆ ಜೀವಜಲ, ಪಾಪ-ಕರ್ಮ, ಕಲ್ಮಶಗಳನ್ನೆಲ್ಲ ತೊಳೆದುಹಾಕಿ ಮೋಕ್ಷ ಕರುಣಿಸುವ ಮಹಾತಾಯಿಯಾಗಿದ್ದಾಳೆ. ಗಂಗಾಮತ ಸಮಾಜ ಬಾಂಧವರು ತಮ್ಮ ಕಾಯಕದ ಜತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಗಂಗಾಮತ ಸಮಾಜ ಚಿಕ್ಕದಾದರೂ ತಮ್ಮ ಕಾಯಕನಿಷ್ಠೆ, ಧರ್ಮ ಮಾರ್ಗದ ಮೂಲಕ ಇತರೆ ಸಮಾಜದೊಂದಿಗೆ ಅನ್ಯೋನ್ಯತೆಯಿಂದ ಬದುಕುತ್ತಿರುವುದು ಇತರೇ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ವೇಳೆ ಸುನೀಲ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಗಂಗಾಮತ ಸಮಾಜದ ಅಧ್ಯಕ್ಷ ಭರಮಪ್ಪ ಕಟ್ಟಿಮನಿ, ಆರ್.ಎಫ್. ರಿತ್ತಿ, ವಿರೇಂದ್ರ ಕಾಳಮ್ಮನವರ, ಎನ್.ಎಸ್. ಜಾಲಗಾರ, ಮಾಂತೇಶ ಶಿಗ್ಲಿ, ರಾಜು ಸುಣಗಾರ, ಎಂ.ಜಿ. ಕಟ್ಟಿಮನಿ, ಬಸವರಾಜ ಜಾಲಗಾರ, ಸೋಮಣ್ಣ ಸುಣಗಾರ, ನಾಗರಾಜ ಸುಣಗಾರ, ಮೌನೇಶ ಬಡಿಗೇರ, ಮಾಲತೇಶ ತಂಡಿಗೇರ, ಆಕಾಶ ಸವದತ್ತಿ, ನಾಗರಾಜ ಮಳಗಿ, ಈಶ್ವರ ಕಟ್ಟಿಮನಿ, ಗುಡದಯ್ಯ ಬಾರ್ಕಿ, ಮಲ್ಲೇಶಪ್ಪ ಬಾರ್ಕಿ, ಉಮೇಶ ಬೆಳವಗಿ, ಬಸವರಾಜ ಬೆಳವಗಿ ಮುಂತಾದವರಿದ್ದರು.