ವಿಜಯಸಾಕ್ಷಿ ಸುದ್ದಿ, ನರೇಗಲ್ : ಪ್ರತಿಭಾವಂತರಿಗೆ ಸಮುದಾಯವು ಎಂದಿಗೂ ಪ್ರೋತ್ಸಾಹವನ್ನು ನೀಡುತ್ತದೆ. ಅದಕ್ಕೆ ಇಂದು ಶಾಲೆಗೆ ಆಗಮಿಸಿ ನಿಮಗೆಲ್ಲ ಪಠ್ಯಪುಸ್ತಕಗಳನ್ನು, ನೋಟ್ ಪುಸ್ತಕಗಳನ್ನು ನೀಡಿದ ಭಾರತಿ ರವಿ ಕುಂಬಾರವರ ಕುಟುಂಬ ವರ್ಗವೇ ಸಾಕ್ಷಿ ಎಂದು ಎಸ್.ಎ.ವಿ. ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ಸಜ್ಜನ ಹೇಳಿದರು.
ಎಸ್.ಎ.ವಿ ಬಾಲಕ ಮತ್ತು ಬಾಲಿಕೆಯರ ಪ್ರೌಢಶಾಲೆಗಳಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಕಲಿತು ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಲಿಕೆಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಮಾತನಾಡಿ, ನಿಮ್ಮ ಪಾಲಕರು ಅನೇಕ ಕನಸುಗಳನ್ನು ಇಟ್ಟುಕೊಂಡು ನಿಮ್ಮನ್ನು ಶಾಲೆಗೆ ಕಳಿಸಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ಆದ್ದರಿಂದ, ಉತ್ತಮವಾಗಿ ಅಧ್ಯಯನ ಮಾಡಿ ಮುಂದಿನ ವರ್ಷ ಇದೇ ರೀತಿಯ ಪುರಸ್ಕಾರಗಳನ್ನು ಪಡೆಯಿರಿ ಎಂದು ತಿಳಿಸಿ, ಕುಂಬಾರ ಕಟುಂಬದವರ ಸೇವೆಯನ್ನು ಸ್ಮರಿಸಿ, ಸಂಸ್ಥೆಯ ಪರವಾಗಿ ಅವರನ್ನು ಅಭಿನಂದಿಸಿದರು.
ವೇದಿಕೆಯ ಮೇಲೆ ಎರಡೂ ಶಾಲೆಗಳ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು. ಎಂ.ವಿ. ಬಿಂಗಿ ಸ್ವಾಗತಿಸಿದರು. ಎಲ್.ಎನ್. ನಾಯಕ ನಿರೂಪಿಸಿದರು. ಎಂ.ವಿ. ವೀರಾಪೂರ ವಂದಿಸಿದರು.