ವಿಜಯಸಾಕ್ಷಿ ಸುದ್ದಿ, ನರೇಗಲ್ : ಗ್ರಾಮೀಣ ಭಾಗದಲ್ಲಿ ಮೊತ್ತ ಮೊದಲ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ತೆರೆಯುವ ಮೂಲಕ ಗ್ರಾಮೀಣ ಮಕ್ಕಳಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಲು ಅನುಕೂಲ ಮಾಡಿಕೊಟ್ಟ ಪ್ರಗತಿಶೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ. ಧನ್ನೂರವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಹೇಳಿದರು.
ಪಟ್ಟಣದ ಡಾ. ಕೆ. ಬಿ. ಧನ್ನೂರ ಪ್ರಗತಿಶೀಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಚರಿಸಲಾದ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಕೆ.ಬಿ. ಧನ್ನೂರ ನರೇಗಲ್ ಪಟ್ಟಣದಲ್ಲಿ ಕಳೆದ ಐದು ದಶಕಗಳಿಂದಲೂ ತಮ್ಮ ಅವಿರತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಾವುದೇ ರೋಗಿ ಯಾವುದೇ ಸಮಯದಲ್ಲಿ ಬಂದು ಅವರ ಸಹಾಯವನ್ನು ಕೇಳಿದರೆ ಇಲ್ಲವೆನ್ನದೆ ಅವರು ತಮ್ಮ ವೈದ್ಯಕೀಯ ಸೇವೆಯನ್ನು ನೀಡಿ ಅವರನ್ನು ಉಪಚರಿಸುತ್ತಾರೆ. ಇಂತಹ ವೈದ್ಯರು ಇಂದಿನ ಸಮಾಜದಲ್ಲಿ ಸಿಗುವುದು ಅಪರೂಪ. ಆದ್ದರಿಂದ ಅವರ ಸಮಾಜಮುಖಿ ಸೇವೆಯನ್ನು ಅವರಿಂದ ಸೇವೆ ಪಡೆದ ಎಲ್ಲರೂ ಸ್ಮರಿಸುತ್ತಾರೆ ಎಂದು ಹೇಳಿದರು.
ಡಾ. ಕೆ.ಬಿ. ಧನ್ನೂರ ಅವರ ಸೇವೆ ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಸಮಾಜ ಸೇವಕರು, ಕೃಷಿಕರು, ಸಂಗೀತಗಾರರು, ಶಿಕ್ಷಣ ಪ್ರೇಮಿಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಧನ್ನೂರ ಬಗ್ಗೆ ಒಂದು ಅಭಿನಂದನಾ ಗ್ರಂಥ ಬೇಗನೆ ರಚನೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಡಾ. ಧನ್ನೂರವರು ವ್ಯವಸ್ಥೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಎದಿರಾಗುವ ಯಾವುದೇ ಸಮಸ್ಯೆಗೂ ಅವರು ಬೆನ್ನು ಹಾಕಿದವರಲ್ಲ.
ಬಹುಮುಖಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಡಾ. ಕೆ.ಬಿ. ಧನ್ನೂರರಿಂದ ಕಲಿಯುವುದು ಬಹಳಷ್ಟಿದೆ ಎಂದರು.
ಸಭೆಯನ್ನುದ್ದೇಶಿಸಿ ನಿವೃತ್ತ ಶಿಕ್ಷಕ ಬಿ.ಜಿ. ಹಳ್ಳೂರ ಮತ್ತು ವರ್ತಕ ಮುತ್ತಣ್ಣ ಪಲ್ಲೇದ ಮಾತನಾಡಿದರು. ವೇದಿಕೆಯ ಮೇಲೆ ಕಸ್ತೂರಿಬಾಯಿ ಧನ್ನೂರ, ಪ.ಪಂ ಮಾಜಿ ಅಧ್ಯಕ್ಷ ಸುನೀಲ ಬಸವರಡ್ಡೇರ, ಸಕ್ರೆಪ್ಪ ಹಡಪದ, ಮುತ್ತಣ್ಣ ಹಡಪದ, ಮುಖ್ಯ ಶಿಕ್ಷಕ ಮಲ್ಲನಗೌಡ್ರ ಮುಂತಾದವರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ಡಾ. ಕೆ.ಬಿ. ಧನ್ನೂರ ತಮ್ಮ ಆಸ್ಪತ್ರೆಯನ್ನು ಪ್ರಾರಂಭಿಸಿ ಜನಾನುರಾಗಿಯಾಗಿರುವುದು ಸುಲಭದ ಮಾತೇನಲ್ಲ. ದೊಡ್ಡ ಊರುಗಳಲ್ಲಿನ ದೊಡ್ಡ ವೈದ್ಯರಿಂದಲೂ ಗುಣಪಡಿಸಲಾಗದ ಅನೇಕ ಕಾಯಿಲೆಗಳನ್ನು ಗುಣಪಡಿಸಿದ ಕೀರ್ತಿ ಅವರಿಗಿದೆ. ತಮ್ಮ ಜೀವನದ 74 ವಸಂತಗಳನ್ನು ಸಮಾಜಮುಖಿ ಸೇವೆಯಲ್ಲಿ ಕಳೆದಿರುವ ಅವರು ಇನ್ನಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದರು.