ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹರಪನಹಳ್ಳಿ
ಅರಸೀಕೆರೆ- ಕಂಚಿಕೇರಿ ರಸ್ತೆ ದುರಸ್ತಿಗಾಗಿ ಅರಸೀಕೆರೆ-ಉಚ್ಚಂಗಿದುರ್ಗ-ಕಂಚಿಕೆರೆ ಮಾರ್ಗದ ವೃತ್ತದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಸಂಚಾರ ಬಂದ್ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಂಚಿಕೇರಿ ರಸ್ತೆ ದುರಸ್ತಿಗಾಗಿ ಹೋರಾಟ ಮಾಡುತ್ತಿರುವವರನ್ನು ಉದ್ದೇಶಿಸಿ ಮಾತನಾಡಿದ ಎಂಜಿನಿಯರ್ ಮಹೇಶ್ವರ್ ನಾಯ್ಕ್, ಮಳೆ ಕಡಿಮೆಯಾದ ಅನಂತರ ಕೆಲಸ ಪ್ರಾರಂಭಿಸುತ್ತವೆ ಎಂದು ಭರವಸೆ ನೀಡಿದರು. ಇದರಿಂದ ಕುಪಿತಗೊಂಡ ರೈತ ಸಂಘಟನೆಯ ಮಹದೇವಪ, ತಾಲೂಕು ಮಟ್ಟದ ಅಧಿಕಾರಿಗಳ ಮುಂದೆ ರಸ್ತೆಯ ತಗ್ಗುಗಳಲ್ಲಿ ನಿಂತ ನೀರಿನಲ್ಲಿ ಉರುಳಾಡಿ, ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡು ಹಸಿರು ಶಾಲನ್ನು ಕೊರಳಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾದ. ಇತರೆ ಕಾರ್ಯಕರ್ತರು ರೈತನ ಆತ್ಮಹತ್ಯೆ ಯತ್ನವನ್ನು ತಡೆದರು.
ಕಾರಾಗೃಹ ಸೇರಲೂ ಸಿದ್ಧ
ನಾಳೆಯಿಂದಲೇ ಕೆಲಸಗಳನ್ನು ಪ್ರಾರಂಭಿಸಬೇಕು. ಇಲ್ಲವೇ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಬೇಕಿದ್ದರೆ ನಮ್ಮನ್ನು ಬಂಧಿಸಿ ಕಾರಾಗೃಹಕ್ಕೆ ಹಾಕಿ, ನಾವು ಸಿದ್ಧವಿದ್ದೇವೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಆಂಬುಲೆನ್ಸ್ ಅಪಘಾತವಾಗಿ ಗರ್ಭಿಣಿಯರು, ಮಕ್ಕಳು ಅಸುನೀಗಿದ ಉದಾಹರಣೆಗಳಿವೆ. ಈ ರಸ್ತೆ ದುರಸ್ತಿ ಆಗದೇ ಇರುವುದಕ್ಕೆ ಕಾರಣ ಇಬ್ಬರು ಶಾಸಕರ ನಡುವಿನ ಪಸೆಂಟೇಜ್ ಆಸೆಗಾಗಿ ಕಾದು ಕುಳಿತಿರುವುದೇ ಮೂಲ ಕಾರಣ ಎಂದು ಸಿ.ಪಿ.ಐ. ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ್ ಆರೋಪಿಸಿದರು.
ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ರಸ್ತೆ ದುರಸ್ತಿಗಾಗಿ ಹಲವು ಬಾರಿ ವಿವಿಧ ಸಂಘಟನೆಯವರು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಕೇವಲ ಭರವಸೆಯಾಗಿ ಉಳಿದಿದ್ದರಿಂದ ಶುಕ್ರವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಿರಂತರ ಹೋರಾಟ
ನಿತ್ಯ ವಾಹನ ಸವಾರರು, ವಿದ್ಯಾರ್ಥಿಗಳು, ಜಿಲ್ಲಾ ಆಸ್ಪತ್ರೆಗೆ ತೆರಳುವ ರೋಗಿಗಳು ನರಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣವಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಕಬ್ಬಳ್ಳಿ ಮೈಲಾರಪ್ಪ ತಿಳಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ, ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘ ಸಮಿತಿ, ಎ ಐ ವೈ ಫ್ ಸಂಘಟನೆ, ಆಟೋ ಚಾಲಕರ ಮತ್ತು ಮಾಲೀಕರ ಸಂಘ ಇತರೆ ಸಂಘಟನೆಯ ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಉಪತಹಶೀಲ್ದಾರ್ ಭರವಸೆ: ಉಪತಹಶೀಲ್ದಾರ್ ಫಾತಿಮಾ ಬಿ. ಮನವಿ ಸ್ವೀಕರಿಸಿ, ಶುಕ್ರವಾರ ಮಧ್ಯಾಹ್ನದಿಂದಲೇ ಕೆಲಸಗಳನ್ನು ಪ್ರಾರಂಭಿಸುವುವಾಗಿ ತಿಳಿಸಿದರು. ಬಳಿಕ ಸಂಘಟನೆಗಳು ಪ್ರತಿಭಟನೆಯನ್ನು ವಾಪಸ್ ಪಡೆದವು. ಪೊಲೀಸ್ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಸಿ.ಪಿ.ಐ. ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್, ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಕಬ್ಬಳ್ಳಿ ಮೈಲಾರಪ್ಪ, ಕರಡಿದುರ್ಗದ ಚೌಡಪ್ಪ, ಮುಗಪ್ಪ, ಕೊಟ್ರೇಶ್ ಸಿದ್ದೇಶಪ್ಪ. ಮಂಜು, ಬಸವರಾಜ, ತಿಪ್ಪೇಶ್, ಕೊಟ್ರಯ್ಯ, ಇದ್ದರು. ಉಪ ತಹಶೀಲ್ದಾರ್ ಫಾತಿಮಾ ಬಿ, ಪಿಎಸ್‌ಐ ಕಿರಣ್ ಕುಮಾರ್ ಎ. ಉಪಸ್ಥಿತರಿದ್ದರು.