ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ 142 ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಈ ಹಿಂದೆ ಹಂಡೇವಜಿರ ಅವರಿಗೆ 2ಎ ಜಾತಿ ಪ್ರಮಾಣ ನೀಡಲಾಗುತ್ತಿತ್ತು. ಈಗ 2ಎ ಪ್ರಮಾಣಪತ್ರ ನೀಡುವ ಬದಲು ತಮಗೆ ತಿಳಿದಂತೆ ಜಾತಿ ಪ್ರಮಾಣ ನೀಡಲಾಗುತ್ತಿದೆ. ಪರಿಣಾಮ ಒಂದೇ ಮನೆಯಲ್ಲಿ ಒಬ್ಬರಿಗೆ 2ಎ ನೀಡಿದರೆ, ಮತ್ತೊಬ್ಬರಿಗೆ ೩ಬಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಹೀಗಾಗಿ ಹಂಡೆವಜೀರ ಸಮುದಾಯಕ್ಕೆ ಎದುರಾಗಿರುವ ಜಾತಿ ಪ್ರಮಾಣ ಪತ್ರದ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಕೆಯಾದವು.
ಉಣಚಗೇರಿ ಗ್ರಾಮದಲ್ಲಿನ ಕೋಳಿ ಫಾರ್ಮ್ ತೆರವಿಗೆ ಈ ಹಿಂದಿನ ಜನಸ್ಪಂದನ ಸಭೆಯಲ್ಲಿ ನೀಡಿದ್ದ ಮನವಿ ಪ್ರಯೋಜನವಾಗಿಲ್ಲ ಎಂದಾಗ, 15 ದಿನದೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪುರಸಭೆಯ ಹಂಗಾಮಿ ಅಧ್ಯಕ್ಷ, ಮಾಜಿ ಚೇರಮನ್ ಸೇರಿ ಪುರಸಭೆಯ ಬಾಗಶಃ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪಟ್ಟಣದ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಚರಂಡಿ, ರಸ್ತೆ ಹದಗೆಟ್ಟಿದ್ದು ದುರಸ್ತಿ ಕೆಲಸಕ್ಕೂ ಸಹ ಅನುದಾನವಿಲ್ಲ. ಹೊಸ ರಸ್ತೆ ಸೇರಿ ಇತರೆ ಕಾಮಗಾರಿಗೆ ಅನುದಾನ ಬಂದಿಲ್ಲ. ಅಲ್ಲದೆ ಸದಸ್ಯರ ಗಮನಕ್ಕೆ ಬಾರದೆ ಕೆಲ ಅನವಶ್ಯಕ ಕಾಮಗಾರಿ ನಡೆಸುವುದರ ಜತೆಗೆ ಪುರಸಭೆ ಸದಸ್ಯರನ್ನು ಕನಿಷ್ಠವಾಗಿ ನಡೆಸಿಕೊಳ್ಳುತ್ತಿದ್ದು, ಸಾರ್ವಜನಿಕ ಸೇವೆಗೆ ತೊಂದರೆ ಕೊಡಲಾಗುತ್ತಿದೆ. ರಾಜೀವ ಗಾಂಧಿ ವಸತಿ ನಿಗಮದಲ್ಲಿ ಸ್ಥಳೀಯ 183/1 ಮತ್ತು 183/3ರಲ್ಲಿ ಬಾಕಿ ಉಳಿದ 18 ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಆದೇಶವಿದ್ದರೂ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದ ಬಳಿಕ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಈ ವೇಳೆ ಜಿ.ಪಂ ಸಿಇಒ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬಿಳಗಿ, ಬಿಇಒ ರುದ್ರಪ್ಪ ಹುರಳಿ ಸೇರಿ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.
ಸಮೀಪದ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯವರು ತಮ್ಮ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ತಡೆಗೊಡೆಯನ್ನು ತೆರವುಗೊಳಿಸುವಂತೆ, ಪಟ್ಟಣದ 22ನೇ ವಾರ್ಡಿನಲ್ಲಿ ರಸ್ತೆಗಳು ಹೊಂಡಗಳಾಗಿವೆ, ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು, 13ನೇ ವಾರ್ಡಿನ ಬಾಲಕಿಯರ ಮಾದರಿ ಶಾಲೆಯಲ್ಲಿ ಶೌಚಾಲಯ ಹಾಗೂ ಇತರ ಸಮಸ್ಯೆಗಳ ಪರಿಹಾರ ಒದಗಿಸಲು, ಬೆಳೆ ಪರಿಹಾರ ಸೇರಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿದ ಅರ್ಜಿಗಳು ಸಲ್ಲಿಕೆಯಾದವು.