ವಿಜಯಸಾಕ್ಷಿ ಸುದ್ದಿ, ರೋಣ : ಸರಕಾರ ಜಾರಿಗೆ ತರಲು ಹೊರಟಿರುವ ಯೋಜನೆಯನ್ನು ಕೈಬಿಟ್ಟು ಈಗಾಗಲೇ ಶಾಲಾ ಪೂರ್ವ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿರುವಂತೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿಯನ್ನು ಆರಂಭಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಗಂಗಮ್ಮ ದ್ಯಾವರಡ್ಡಿ ಹೇಳಿದರು.
ಅವರು ಬುಧವಾರ ಸಿಐಟಿಯು ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಅಂಗನವಾಡಿ ಶಿಕ್ಷಕಿಯರು ಸಹ ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸುವ ಎಲ್ಲ ಅರ್ಹತೆಯನ್ನು ಹೊಂದಿದ್ದು, ಸರಕಾರ ಬೇರೆಯವರೆಗೆ ತರಬೇತಿ ಕೊಟ್ಟು ನೇಮಕ ಮಾಡಿಕೊಳ್ಳುವ ಬದಲು ನಮಗೆ ತರಬೇತಿ ನೀಡಲಿ. ಶೀಘ್ರವೇ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ/ಯುಕೆಜಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಶೋಬಾ ಭಜಂತ್ರಿ ಮಾತನಾಡಿ, ರಾಜ್ಯ ಅಥವಾ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸಬಾರದು. ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಎನ್ನುವುದನ್ನು ಸರಕಾರ ಅರಿತುಕೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಖಾತ್ರಿ ಪಡಿಸಬೇಕು ಎಂದರು. ಉಪತಹಸೀಲ್ದಾರ್ ಜೆ.ಟಿ. ಕೊಪ್ಪದ ಮನವಿ ಸ್ವೀಕರಿಸಿದರು.
ಮೀನಾಕ್ಷಿ ಹುಯಿಲಗೋಳ, ಶಾರದಾ ಸುಂಕದ, ಶೋಬಾ ಟಂಕಸಾಲಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.