HomeGadag Newsನ್ಯಾನೋ ಯೂರಿಯಾ ಬಳಕೆ ಬೆಳೆಗಳಿಗೆ ವರದಾನ

ನ್ಯಾನೋ ಯೂರಿಯಾ ಬಳಕೆ ಬೆಳೆಗಳಿಗೆ ವರದಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಗೋವಿನಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದಾರೆ. ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮೀ.ಲೀ ನ್ಯಾನೋಯೂರಿಯಾ ಬಳಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಹೆಚ್ ತಿಳಿಸಿದ್ದಾರೆ.

ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಬೇಕಾದ ಪೋಷಕಾಂಶಗಳು ಕೇವಲ ಶೇ.50ರಷ್ಟು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ ಹಾಗೂ ಉಳಿದ ಪೋಷಕಾಂಶಗಳು ನೀರಿನ ಹರಿಯುವಿಕೆಯಿಂದ ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕ್ಕಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ (20-50ಎನ್‌ಎಂ) ಬಳಸುವುದರಿಂದ ಬೆಳೆಗಳಿಂದ ಶೇ. 90ರಷ್ಟು ಪೋಷಕಾಂಶಗಳು ಉಪಯುಕ್ತವಾಗುತ್ತದೆ.

ನ್ಯಾನೋ ಯೂರಿಯಾದಲ್ಲಿ ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆ ನಿರ್ವಹಣೆಯಾಗುವುದರ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕವು ಸಸ್ಯಗಳಲ್ಲಿ ಹೈಡ್ರೋಲಿಸಿಸ್ ಆಗಿ ಅಮೋನಿಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಬೆಳೆಗಳಿಗೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ ಮತ್ತು ಇತರೆ ಪೋಷಕಾಂಶವನ್ನು ತೆಗೆದುಕೊಳ್ಳುವ ಸಂಯೋಜಿತ ಮಾರ್ಗವನ್ನು ಪ್ರಚೋದಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಿ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.

ಹರಳು ರೂಪದ ಯೂರಿಯಾ ತಯಾರಿಕೆಯಲ್ಲಿ ಫಿಲ್ಲರ್ ಪದಾರ್ಥಗಳ ಬಳಕೆಯಿಂದ ಮಣ್ಣಿನ ಪೋಷಕಾಂಶಗಳಿಗೆ ಹಾನಿಯಾಗಿ, ಜಲ ಮೂಲಗಳಿಗೆ ನೈಟ್ರೇಟ್ ಮಾಲಿನ್ಯ ಹರಡುತ್ತದೆ ಹಾಗೂ ಬ್ಲೂ ಬೇಬಿ ಸಿಂಡ್ರೋಮ್ ನವಜಾತ ಶಿಶುಗಳಲ್ಲಿ ಕಂಡು ಬರುವ ಸಾಧ್ಯತೆಗಳಿರುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಹರಳು ರೂಪದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಬಹುದು. ರೈತರು ಇದನ್ನು ಸುಲಭವಾಗಿ ಶೇಖರಿಸಿ ಸಾಗಾಣಿಕೆ ಮಾಡಬಹುದು. ಇದು ಮಣ್ಣು, ಗಾಳಿ, ನೀರಿನ ಗುಣಮಟ್ಟ ಹಾಗೂ ಒಟ್ಟಾರೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿರುತ್ತದೆ. ಏಕದಳ, ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳಲ್ಲಿ ಮೊದಲನೇ ಸಿಂಪಡಣೆಯನ್ನು ಮೊಳಕೆಯೊಡೆದ 30-35 ದಿನಗಳ ನಂತರ ಹಾಗೂ ಎರಡನೇ ಸಿಂಪಡಣೆಯನ್ನು 50-60 ದಿನಗಳ ನಂತರ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದು ಬಾಟಲ್ ನ್ಯಾನೋಯೂರಿಯಾ (500 ಮೀ.ಲೀ) ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾಗಿರುತ್ತದೆ. ಒಂದು ಬಾಟಲ್ ನ್ಯಾನೋ ಯೂರಿಯಾ ದರವು ರೂ.225 ಇದ್ದು, ಸಬ್ಸಿಡಿ ರಹಿತವಾಗಿರುತ್ತದೆ. ಹರಳು ರೂಪದ ನ್ಯಾನೋಯೂರಿಯಾದದರ ಸಬ್ಸಿಡಿ ಒಳಗೊಂಡಂತೆ ರೂ. 266 ಇದೆ. ಕೇಂದ್ರ ಸರ್ಕಾರಕ್ಕೆ ಆಮದು ರೂಪದಲ್ಲಿ ಆಮದು ಹೆಚ್ಚಿನ ಹೊರೆಯಾಗುತ್ತಿದೆ ಹಾಗೂ ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾದ ಬಳಕೆಯು ಸಬ್ಸಿಡಿ ಹೊರೆಯನ್ನು ತಗ್ಗಿಸುವುದರ ಜೊತೆಗೆ ವಿದೇಶಿ ವಿನಿಮಯದ ಉಳಿಕೆಗೆ ಸಹ ಉತ್ತೇಜನ ನೀಡುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ಇಫ್ಕೋ ಸಂಸ್ಥೆಯ ಪ್ರತಿನಿಧಿ ಗಣೇಶ ಮೊಬೈಲ್ ಸಂಖ್ಯೆ-9448090423 ಇವರನ್ನು ಸಂಪರ್ಕಿಸಬಹುದಾಗಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!