ಬೆಂಗಳೂರು: ಹೈಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ಸರ್ವೇಗೆ ಬಿಬಿಎಂಪಿ ಮುಂದಾಗಿದೆ.
ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿತವಾಗಿತ್ತು. ಅಲ್ಲದೇ SSLC ಪರೀಕ್ಷೆಯಲ್ಲೂ ಕೆಲ ಶಾಲೆಗಳ ಫಲಿತಾಂಶ ಕುಸಿತವಾಗಿತ್ತು. ಸದ್ಯ ಇದರಿಂದ ಅಲರ್ಟ್ ಆದ ಪಾಲಿಕೆ, ಇದೀಗ ಹೈಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ಸರ್ವೇಗೆ ಮುಂದಾಗಿದೆ.
ಸದ್ಯ ಪಾಲಿಕೆ ವ್ಯಾಪ್ತಿಯ ಸ್ಲಂಗಳು, ಮಧ್ಯಮವರ್ಗದ ಜನರು ವಾಸಿಸೋ ಜಾಗಗಳಲ್ಲೂ ಸರ್ವೇಗೆ ಸಜ್ಜಾಗಿರೋ ಪಾಲಿಕೆ, ಮಕ್ಕಳು ಶಾಲೆ ಬಿಡಲು ಇರೋ ಕಾರಣ ಹಾಗೂ ಪೋಷಕರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕೋದಕ್ಕೆ ಪ್ಲಾನ್ ಮಾಡಿದೆ. ಗಾಂಧಿನಗರ ವಿಧಾನಸಭಾಕ್ಷೇತ್ರದ ಬಳಿಕ ಇತರೆ ಭಾಗಗಳಲ್ಲೂ ಸರ್ವೇ ನಡೆಸೋಕೆ ಚಿಂತನೆ ನಡೆಸಿರೋ ಪಾಲಿಕೆ ಇದಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಕರೆದಿದೆ.
ಇತ್ತ ಪಾಲಿಕೆ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗ್ತಿದೆ. ಒಂದೆಡೆ ಪಾಲಿಕೆ ಶಾಲೆಗಳಿಗೆ ಮೂಲಸೌಕರ್ಯ ನೀಡದೇ ಸರ್ವೇಗೆ ಕೋಟಿ ಕೋಟಿ ಹಣ ಕೊಡಲು ಹೊರಟಿದ್ರೆ, ಮತ್ತೊಂದೆಡೆ ಈಗಾಗಲೇ ಸರ್ವೇ ಹೆಸರಲ್ಲಿ ಅಕ್ರಮ ಎಸಗಿದ್ದ ಚಿಲುಮೆ ಸಂಸ್ಥೆಯ ಹಗರಣದಿಂದ ಜನರು ತಮ್ಮ ಡೇಟಾ ನಿಡೋಕೆ ಆತಂಕಪಡುವಂತಾಗಿದೆ. ಸದ್ಯ ಮಕ್ಕಳ ಸರ್ವೇ ನೆಪದಲ್ಲಿ ಖಾಸಗಿ ಮಾಹಿತಿ ಕಲೆಹಾಕೋ ಖಾಸಗಿ ಸಂಸ್ಥೆ, ಅದನ್ನ ದುರುಪಯೋಗ ಮಾಡಿಕೊಳ್ಳಬಹುದು ಅನ್ನೋ ಆರೋಪ ಕೂಡ ಕೇಳಿಬರ್ತಿದೆ.
ಇದೀಗ ಶಾಲೆ ಬಿಟ್ಟ ಮಕ್ಕಳನ್ನ ಸರ್ವೇ ಮಾಡಲು ಹೊರಟಿದ್ದು, ಸದ್ಯ ಈ ಸರ್ವೇ ಬಳಿಕವಾದ್ರೂ ಮಕ್ಕಳು ಶಾಲೆಗಳಿಗೆ ಬರಲು ಸೂಕ್ತ ವಾತಾವರಣ ನಿರ್ಮಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.