ನವದೆಹಲಿ: ಮೈಸೂರಿನ ಮಾಜಿ ಸಂಸದ ಸಿ.ಹೆಚ್ ವಿಜಯ್ ಶಂಕರ್ ಅವರನ್ನ ಮೇಘಾಲಯದ ನೂತನ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ತೆಲಂಗಾಣ, ಜಾರ್ಖಂಡ್, ಮೇಘಾಲಯ ಸೇರಿದಂತೆ ಒಟ್ಟು 10 ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾಗಿದೆ. ಈ ಪೈಕಿ ಕರ್ನಾಟಕದ ಮಾಜಿ ಸಂಸದ, ಮಾಜಿ ಸಚಿವ, ಸಿ.ಎಚ್.ವಿಜಯ್ ಶಂಕರ್ ಅವರನ್ನು ಮೇಘಾಲಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.
ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಎಚ್ ವಿಜಯ್ ಶಂಕರ್ ಅವರು ರಾಣೆ ಬೆನ್ನೂರು ಮೂಲದವರಾಗಿದ್ದು, 1994ರಿಂದ 98ರವರೆಗೆ ಮೊದಲ ಬಾರಿಗೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2010ರಿಂದ 16ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು, 2010ರಲ್ಲಿ ಕರ್ನಾಟಕ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು.