ವಿಜಯಸಾಕ್ಷಿ ಸುದ್ದಿ, ನರೇಗಲ್ : ಹಾಲಕೆರೆಯ ಶ್ರೀ ಅನ್ನದಾನೇಶ್ವರ ಮಠ ಈ ಭಾಗದ ಶೃದ್ಧಾ-ಭಕ್ತಿಯ ಕೇಂದ್ರವಾಗಿದೆ. ಇಲ್ಲಿನ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಪವಿತ್ರ ಮಾಸವಾಗಿರುವ ಶ್ರಾವಣದಲ್ಲಿ ಮಹಿಳೆಯರಿಗೆಂದೇ ಒಂದು ವಿಶೇಷ ಕಾರ್ಯಕ್ರಮವನ್ನು ನೀಡಬೇಕೆನ್ನುವ ಹಿನ್ನೆಲೆಯಲ್ಲಿ ಬೆಳ್ಳಿ ರಥೋತ್ಸವದ ಕಲ್ಪನೆಯನ್ನು ಜಾರಿಗೆ ತಂದರು. ಪ್ರತಿ ವರ್ಷದ ಶ್ರಾವಣ ಮಾಸದ ಎರಡನೇ ಸೋಮವಾರ ಈ ರಥೋತ್ಸವ ನಡೆಸಬೇಕೆನ್ನುವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಎರಡನೇ ಶ್ರಾವಣ ಸೋಮವಾರದ ನಿಮಿತ್ತ ಜರುಗಿದ ಸಮಾರಂಭದಲ್ಲಿ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಪೀಠಾಧಿಪತಿಗಳಾಗಿರುವ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಈ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಸಮಸ್ತ ಭಕ್ತರ ಭಾಗ್ಯವಾಗಿದೆ. ಈ ರಥೋತ್ಸವದಲ್ಲಿ ಬೆಳ್ಳಿಯ ತೇರನ್ನು ಮಹಿಳೆಯರೇ ಎಳೆಯುವುದು ಅತ್ಯಂತ ವಿಶೆಷವಾಗಿದೆ. ಈ ಸಮಯದಲ್ಲಿ ಮಹಿಳೆಯರ ಹುರುಪು-ಹುಮ್ಮಸ್ಸುಗಳನ್ನು ನೋಡುವುದೇ ಒಂದು ಸೊಗಸು ಎಂದರು.
ಸೋಮವಾರ ಸಂಜೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಥೋತ್ಸವಕ್ಕೆ ಚಾಲನೆ ನೀಡಲು ಬರುತ್ತಿದ್ದಂತೆ ನೆರೆದ ಮಹಿಳೆಯರ ಮತ್ತು ಪುರುಷರ ಉತ್ಸಾಹ ನೂರ್ಮಡಿಯಾಯಿತು. ಶ್ರೀಮಠದ ಪೀಠಾಧಿಪತಿಗಳಾಗಿರುವ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ನಾಡಿನ ಇತರೆ ಭಾಗದಿಂದ ಆಗಮಿಸಿದ್ದ ಅನೇಕ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಹಾಲಕೆರೆ ಮಾತ್ರವಲ್ಲದೆ ಸುತ್ತಲಿನ ಗ್ರಾಮಗಳಾದ ನರೇಗಲ್ಲ, ಜಕ್ಕಲಿ, ಕರಮುಡಿ, ಗಜೇಂದ್ರಗಡ, ನಿಡಗುಂದಿ, ರೋಣ ಮತ್ತು ಪಕ್ಕದ ಜಿಲ್ಲೆಗಳಾದ ಕೊಪ್ಪಳ, ಬಾಗಲಕೋಟೆ ಮುಂತಾದ ಜಿಲ್ಲೆಗಳಿಂದಲೂ ಮಹಿಳಾ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.