ವಿಜಯಸಾಕ್ಷಿ ಸುದ್ದಿ, ನರೇಗಲ್ : ನಿತ್ಯವೂ ನಮ್ಮ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಬೇಡವಾದ ವಿಷಯಗಳೆಲ್ಲವನ್ನೂ ತುಂಬಿಕೊಂಡು ಹೊಲಸಾಗಿರುತ್ತದೆ. ಈ ಹೊಲಸನ್ನು ತೊಳೆಯಲು ಶರಣರ ವಚನಗಳ ಸಹಾಯ ಬೇಕೇ ಬೇಕು. ಶರಣರ ವಚನಗಳಿಂದ ಮನದ ಮಲಿನತೆಯನ್ನು ದೂರ ಮಾಡಿಕೊಳ್ಳಿ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ನುಡಿದರು.
ಸಮೀಪದ ಕೋಚಲಾಪೂರ ಗ್ರಾಮಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸವೇಶ್ವರ ದೇವಸ್ಥಾನದ ಉದ್ಘಾಟನೆಯ ಮುನ್ನಾ ದಿನ ಕೋಚಲಾಪೂರಕ್ಕೆ ಆಗಮಿಸಿದ್ದ ಅವರು ನೆರೆದ ಭಕ್ತ ಸಮೂಹವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಶರಣರ ವಚನ, ಪುರಾಣಗಳು ಮನುಷ್ಯನ ಮನಸ್ಸಿನ ತಾಪ ಕಳೆಯುವ ಛತ್ರಿಗಳಿದ್ದಂತೆ. ಇದರ ಅಡಿಯಲ್ಲಿ ಯಾರು ನಡೆಯುತ್ತಾರೆಯೋ ಅವರು ಎಂದಿಗೂ ಸುಖದ ನೆರಳಿನಲ್ಲಿಯೆ ಬದುಕುತ್ತಾರೆ. ಹೀಗಾಗಿ, ನಮ್ಮ ಹಿರಿಯರು ಶ್ರಾವಣ ಮಾಸದಲ್ಲಿ ಇವುಗಳನ್ನೆಲ್ಲ ಕೇಳುವ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ. ಮನುಷ್ಯ ತಾಯಿಯ ಗರ್ಭದಿಂದ ಹೊರ ಬಂದು ಭೂತಾಯಿಯ ಗರ್ಭ ಸೇರುವವರೆಗೂ ಅವನಿಗೆ ತಾಪತ್ರಯಗಳು ತಪ್ಪಿದ್ದಲ್ಲ. ಈ ತಾಪತ್ರಯಗಳ ನಡುವೆಯೆ ಭಗವಂತನನ್ನು ಸ್ಮರಿಸುತ್ತ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವತ್ತ ನಾವು ಜೀವನವನ್ನು ಸಾಗಿಸಬೇಕೆಂದು ಶ್ರೀಗಳು ತಿಳಿಸಿದರು.
ಜೀವನ ಸಮಸ್ಯೆಗಳ ಸರಮಾಲೆ. ಬದುಕಿನಲ್ಲಿ ಸುಖ ಎಂಬುದು ಯಾವಾಗಲೂ ಮರೀಚಿಕೆಯಾಗಿರುತ್ತದೆ. ಜೀವನದಲ್ಲಿನ ಸಮಸ್ಯೆಗಳಿಗೆ ಹೆದರಿ ಎಂದಿಗೂ ಆತ್ಮಹತ್ಯೆಗೆ ಮುಂದಾಗಬಾರದು. ಜೀವನವನ್ನು ಛಲದಿಂದ, ಧೈರ್ಯದಿಂದ ಎದುರಿಸಬೇಕು. ದೇವನು ಕೊಟ್ಟಿರುವ ಈ ದೇಹ ಅನೇಕ ರೋಗಗಳ ತವರೂರಾಗಿದೆ. ರೋಗ ಬಂದ ನಂತರ ಅದನ್ನು ವಾಸಿ ಮಾಡಲು ಹೋರಾಡುವ ಬದಲಾಗಿ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅದಕ್ಕಾಗಿ ನೀವು ದುಶ್ಚಟಗಳಿಂದ ದೂರವಿರಬೇಕೆಂದು ಶ್ರೀಗಳು ಹೇಳಿದರು.
ಗ್ರಾಮದಲ್ಲಿ ಗುಡಿ ಕಟ್ಟುವುದು ಮಹತ್ವದ್ದಲ್ಲ. ಊರಿನ ಜನರ ನಡುವಿನ ಮನಸ್ಸನ್ನು ಕಟ್ಟುವುದು ಮಹತ್ವದ್ದಾಗಿದೆ. ಊರಿನಲ್ಲಿನ ಎಲ್ಲ ಜನರೂ ಸಾಮರಸ್ಯದಿಂದ ಬದುಕು ಸಾಗಿಸುವುದು ಬಹಳ ಮುಖ್ಯ.
ಇದರಿಂದ ಗ್ರಾಮವೇ ಒಂದು ಗುಡಿಯಾಗುತ್ತದೆ. ಅಂತಹ ವಾತಾವರಣವನ್ನು ತಾವು ಕೋಚಲಾಪೂರದಲ್ಲಿ ಕಂಡಿರುವುದಾಗಿ ತಿಳಿಸಿದ ಶ್ರೀಗಳು, ಇದು ಎಲ್ಲ ಗ್ರಾಮಗಳಿಗೆ ಮಾದರಿಯಾಗಬೇಕೆಂದರು.
ಮನುಷ್ಯ ಬೆಳಿಗ್ಗೆ ಏಳುತ್ತಲೇ ಮೂರು ಮುಖ್ಯ ಕೆಲಸಗಳನ್ನು ಮಾಡಬೇಕು. ಒಳ್ಳೆಯ ವಿಚಾರದೊಂದಿಗೆ ಏಳಬೇಕು. ಇದೇ ಒಳ್ಳೆಯ ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಭಗವಂತನಿಗೆ ನಮಿಸಬೇಕು. ಅಂದು ಆ ದಿನದ ಒಳ್ಳೆಯ ವಿಚಾರವನ್ನು ಸಾರ್ಥಕ ಪಡಿಸಲು ಪ್ರಯತ್ನಿಸಬೇಕು. ಇದರಿಂದ ಮನುಷ್ಯ ಜೀವನದ ಸಾರ್ಥಕತೆ ಸಾಧ್ಯವಾಗುತ್ತದೆ. ಜೀವನಕ್ಕೆ ಸುಖ-ದುಃಖಗಳೆಂಬ ಎರಡು ದಂಡೆಗಳಿವೆ. ಈ ದಂಡೆಗಳ ನಡುವೆಯೇ ಬದುಕೆಂಬ ಪ್ರವಾಹದಲ್ಲಿ ನಮ್ಮ ಜೀವನ ನಡೆಯಬೇಕು ಎಂದು ತಿಳಿಸಿದರು.
ಪ್ರವಚನಕಾರರಾದ ವೀರೇಶ್ವರ ಶಾಸ್ತಿçಗಳು, ಶಂಕ್ರಯ್ಯ ಮೇಟಿಮಠ, ವಿರುಪಾಕ್ಷಗೌಡ ರಡ್ಡೇರ ಸೇರಿದಂತೆ ಕೋಚಲಾಪೂರ ಸುತ್ತಲಿನ ಗ್ರಾಮಗಳ ಅನೇಕ ಸದ್ಭಕ್ತರು ಇದ್ದರು.
ಮನುಷ್ಯ ಎಲ್ಲವನ್ನೂ ಲಾಭದಿಂದ ನೋಡುವುದನ್ನು ಬಿಡಬೇಕು. ಬರೀ ಲಾಭವೇ ಜೀವನವಲ್ಲ. ಕಾಯಕ, ದಾಸೋಹ, ಅನುಭಾವ ಮಾಡುವ ವ್ಯಕ್ತಿ ಶರಣನಾಗುತ್ತಾನೆ. ಇದನ್ನು ನಿಮಗೆಲ್ಲರಿಗೂ ಮಾಡಲು ಸಾಧ್ಯವಾದರೆ ನೀವೆಲ್ಲರೂ ಶರಣರಾಗುವಿರಿ. ಹಳಸಿದ ಅನ್ನ ಉಂಡರೆ ಹೊಟ್ಟೆ ಕೆಡುತ್ತದೆ. ಹಳಸಿದ ಮಾತುಗಳನ್ನು ಕೇಳಿದರೆ ಮನಸ್ಸು ಕೆಡುತ್ತದೆ. ಆದ್ದರಿಂದ ಕೆಡಕಿನ ಮಾತುಗಳತ್ತ ಎಂದಿಗೂ ಕಿವಿಗೊಡಬೇಡಿ. ಇರುವಷ್ಟು ದಿನ ಪುಣ್ಯದ ಕೆಲಸ ಮಾಡಲು ಮುಂದಾಗಿ. ಪುಣ್ಯದ ಕೆಲಸ ಮಾಡಿದರೆ ಸುಖ, ಪಾಪದ ಕೆಲಸ ಮಾಡಿದರೆ ದುಃಖ ಎಂದು ಶ್ರೀಗಳು ಹಿತ ನುಡಿದರು.