ವಿಜಯಸಾಕ್ಷಿ ಸುದ್ದಿ, ಡಂಬಳ : ಕ್ರೀಡೆ ದೈಹಿಕ, ಮಾನಸಿಕವಾಗಿ ಸದೃಢತೆಯನ್ನು ತಂದುಕೊಡುತ್ತದೆ. ಆ ದಿಸೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಶ್ರಮಿಸಿದಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಎಲ್ಲರೂ ಕ್ರೀಡಾಭಿಮಾನ ಬೆಳೆಸಿಕೊಂಡು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಮುಂದಾಗುವಂತೆ ಪರಿಸರವಾದಿ ಗೋಣಿಬಸಪ್ಪ ಕೊರ್ಲಹಳ್ಳಿ ಕರೆ ನೀಡಿದರು.
ಡಂಬಳ ಗ್ರಾಮದ ಕಾಳಮ್ಮ ಹುಲಬನ್ನಿ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಕದಾಂಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಶ್ರಮಕ್ಕೆ ಆದ್ಯತೆ ನೀಡದೇ ದುಶ್ಚಟಗಳ ದಾಸರಾಗುತ್ತಿರುವ ಬಹುತೇಕ ಯುವಕರು ಯಂಗ್(ಯುವಕ) ಸ್ಟಾರ್ಗಳಾಗದೇ ಜಂಗ್ (ತುಕ್ಕು) ಸ್ಟಾರ್ಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ದೈಹಿಕವಾಗಿ ಒಂದಿಷ್ಟು ಶ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅದೇ ದೇಹ ತಮಗೆ ಭಾರವೆನಿಸಲಿದೆ. ಕ್ರೀಡಾ ಸಾಧನೆ ಬದಲಾಗಿ ಆರೋಗ್ಯವಂತ ಮನಸ್ಸಿದ್ದರೆ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಡಿಪಿಇಪಿ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಗೌಸಿದ್ದಪ್ಪ ಹಾದಿಮನಿ, ಸಿಆರ್ಪಿ ಎಸ್.ಎಮ್. ಪಾಟೀಲ್ ಮಾತನಾಡಿ, ಕ್ರೀಡೆ ಮತ್ತು ಪಠ್ಯ ಎರಡರಲ್ಲೂ ಉತ್ತಮ ಸಾಧನೆ ಮಾಡಬೇಕು. ಕ್ರೀಡೆಗಳಿಂದ ಶಾರೀರಿಕ ಚೈತನ್ಯ, ಮಾನಸಿಕ ಉಲ್ಲಾಸ ಸಾಧ್ಯ. ಕ್ರೀಡಾಕೂಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷೆ ಶ್ರೀದೇವಿ ಹಿರೇಮಠ, ಕದಾಂಪುರ ಶಾಲೆಯ ಮುಖ್ಯೋಪಾಧ್ಯಾಯೆ ಶಿವಲೀಲಾ ಆದಪ್ಪನವರ, ಬಿ.ಜೆ. ಪಾಟೀಲ್, ಎಸ್ಡಿಎಮ್ಸಿ ಸದಸ್ಯರಾದ ದುರ್ಗಪ್ಪ ಹರಿಜನ್, ರೇವಣಸಿದ್ದಪ್ಪ ಕರಿಗಾರ, ವೈ.ಎಸ್. ಓಸೇಕರ್, ಸಿಆರ್ಪಿ ಮೃತ್ಯುಂಜಯ ಪೂಜಾರ, ಮುಖ್ಯೋಪಾಧ್ಯಾಯ ಬಿ.ಜೆ. ಪಾಟೀಲ, ವಿದ್ಯಾರ್ಥಿಗಳು, ದೇಹಿಕ ಶಿಕ್ಷಕರು, ಕ್ರೀಡಾಭಿಮಾನಿಗಳು ಇದ್ದರು.