ತಾರಾಲಯ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ : ಭೋಸರಾಜು

0
Visit to Dharwad Sub Regional Science Centre
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ 9 ಕೋಟಿ ರೂ ವೆಚ್ಚದ ತಾರಾಲಯ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಸೂಚನೆ ನೀಡಿದರು.

Advertisement

ಧಾರವಾಡ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಅನುಕೂಲಕ್ಕಾಗಿ ವಿಜ್ಞಾನ ಕೇಂದ್ರಗಳನ್ನು ಹಾಗೂ ತಾರಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಚಿತ್ರದುರ್ಗ, ವಿಜಯಪುರ, ರಾಮನಗರ ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಧಾರವಾಡ ವಿಜ್ಞಾನ ಕೇಂದ್ರ ಉತ್ತಮವಾಗಿ ನಿರ್ವಹಣೆ ಆಗುತ್ತಿದೆ. ಆಯಾ ಕಾಲಘಟ್ಟಕ್ಕೆ ಅನುಗುಣವಾದ ಹೊಸ ಪ್ರದರ್ಶನಗಳನ್ನ ಅಳವಡಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಅಭಿವೃದ್ಧಿ ಕಾರ್ಯಗಳು ಸುಲಲಿತವಾಗಿ ನಡೆಯುವಂತೆ ಕ್ರಮವಹಿಸಲು ಆಗಾಗ್ಗೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಅವರಿಗೆ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ಧಾರವಾಡ ಜಿಲ್ಲೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 100 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಲಾಗಿದೆ. ಹಲವಾರು ಜಲಾನಯನ ಹಾಗೂ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಇಲಾಖೆಗೆ ಅಗತ್ಯ ಅನುದಾನ ನೀಡುತ್ತಿದ್ದಾರೆ. ಇಲಾಖೆ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ವಲಯವಾರು ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಕೇರಳ ಹಾಗೂ ಗುಜರಾತ್ ಮಾದರಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ 200 ಕೋಟಿ ರೂ ವೆಚ್ಚದಲ್ಲಿ ವಿಜ್ಞಾನ ನಗರ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್. ಕೋನರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರದ ಜಲಶಕ್ತಿ ಮಂತ್ರಾಲಯದಿಂದ ಅಂತರ್ಜಲ ಅಭಿವೃದ್ಧಿಗೆ 2200 ಕೋಟಿ ರೂ ಗಳ ಪ್ರಸ್ತಾವನೆಯನ್ನು ಸಿದ್ಧಗೊಳಿಸಿದ್ದು, ಇದರಿಂದ 9 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಯೋಜನೆ ಹಮ್ಮಿಕೊಳ್ಳಲಾಗುವುದು. ಕೇಂದ್ರದ ಶೇ.60 ಹಾಗೂ ರಾಜ್ಯ ಶೇ. 40ರಷ್ಟು ಅನುದಾನ ಭರಿಸಲಾಗುವುದು. ಇದರಿಂದ 41 ತಾಲೂಕಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ತುಪ್ಪರಿಹಳ್ಳ ಹಾಗೂ ಬೆಣ್ಣೆಹಳ್ಳ ಏತ ನೀರಾವರಿಗೆ ಸಂಬಂಧಪಟ್ಟಂತೆ ಸಂಮೀಕ್ಷೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಸರಣಿ ಚೆಕ್‌ಡ್ಯಾಂ ಹಾಗೂ ಬ್ಯಾರೇಜ್‌ಗಳ ನಿರ್ಮಾಣಕ್ಕೆ ಯೋಜಿಸಲಾಗುತ್ತಿದೆ ಎಂದು ಎನ್.ಎಸ್. ಭೋಸರಾಜು ತಿಳಿಸಿದರು.


Spread the love

LEAVE A REPLY

Please enter your comment!
Please enter your name here