ವಿಜಯಸಾಕ್ಷಿ ಸುದ್ದಿ, ಧಾರವಾಡ : ಅಳ್ನಾವರ ತಾಲೂಕಿನ ಐತಿಹಾಸಿಕ ಹುಲಿಕೇರಿ ಇಂದ್ರಮ್ಮ ಕೆರೆಗೆ ಭೇಟಿ ನೀಡಿ, ಬಾಗಿನ ಅರ್ಪಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಅವರು ಕೆರೆ ದುರಸ್ತಿ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಂಗಳವಾರ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದ್ರಮ್ಮ ಸಣ್ಣ ನೀರಾವರಿ ಕೆರೆ ಪುನರುಜ್ಜೀವನ ಕಾಮಗಾರಿಯ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಇಂದ್ರಮ್ಮ ಕೆರೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ನಾಲ್ಕು ಬಾರಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿದ್ದ ಗುತ್ತಿಗೆದಾರ ಕಾಮಗಾರಿಯನ್ನು ಪ್ರಾರಂಭಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಬಾರಿ ಈ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಕ್ರಮಗಳನ್ನ ಕೈಗೊಳ್ಳಬೇಕು. ಕ್ಷಿಪ್ರಗತಿಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಕೆರೆಯ 2 ನಾಲೆಗಳ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.
2020ರಲ್ಲಿ 940 ಕೋಟಿ ರೂ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಗುತ್ತಿಗೆದಾರ ಕಾಮಗಾರಿಯನ್ನು ಪ್ರಾರಂಭಿಸದೇ ಅನಗತ್ಯ ವಿಳಂಬ ಮಾಡಿದ್ದ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದ ಸಚಿವರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಆ ಗುತ್ತಿಗೆದಾರ ಈ ಬಾರಿಯ ಟೆಂಡರ್ ಪ್ರಕ್ರಿಯೆಯಲ್ಲೂ ಪಾಲ್ಗೊಂಡಿರುವುದನ್ನು ತಿಳಿದ ಸಚಿವರು ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು.
ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು, ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ಕಾರ್ಯದರ್ಶಿಗಳಾದ ರಾಘವನ್ ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.