HomeMUNICIPALITY NEWSಪೌರ ಕಾರ್ಮಿಕರಿಗೆ ಆರೋಗ್ಯದೆಡೆ ಗಮನವಿರಲಿ

ಪೌರ ಕಾರ್ಮಿಕರಿಗೆ ಆರೋಗ್ಯದೆಡೆ ಗಮನವಿರಲಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮನೆಯ ಸ್ವಚ್ಛತೆಗೆ ಆದ್ಯತೆ ನೀಡಿದಂತೆ, ಮನೆಯಂಗಳದ ಸ್ವಚ್ಛತೆಗೆ ಪ್ರತಿಯೊಬ್ಬರೂ ಮುಂದಾದರೆ ಅದೇ ನಾವು ಪೌರಕಾರ್ಮಿಕರಿಗೆ ನೀಡುವ ಗೌರವವಾಗಿದೆ ಎಂದು ಸಾಯಿದತ್ತಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಆರ್.ಎಸ್. ಜೀರೆ ಹೇಳಿದರು.

ಪಟ್ಟಣದ ಸಾಯಿದತ್ತಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಪುರಸಭೆಯಿಂದ ನಡೆದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಳೆ, ಗಾಳಿ, ಬಿಸಿಲು ಲೆಕ್ಕಿಸಿದೆ, ಹಬ್ಬ ಹರಿದಿನಗಳನ್ನೂ ಬದಿಗೊತ್ತಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುವ ಪೌರ ಕಾರ್ಮಿಕರು ಸ್ವಚ್ಛ ಭಾರತದ ನಿಜವಾದ ರಾಯಭಾರಿಗಳಾಗಿದ್ದಾರೆ. ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಗಳು ನಿಯಮಿತವಾಗಿ ನಡೆಯಬೇಕು ಎಂದರು.

ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಪಟ್ಟಣದ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ವರ್ಷದಲ್ಲಿ 2-3 ಬಾರಿ ನಡೆಸುವುದರ ಜತೆಗೆ ಆರೋಗ್ಯ ರಕ್ಷಣೆಗಾಗಿ ಕಿಟ್‌ಗಳ ವಿತರಣೆ ಹಾಗೂ ಸ್ವಚ್ಛತೆಯ ಸಂದರ್ಭದಲ್ಲಿ ಪೌರಕಾರ್ಮಿಕರು ಅನುಸರಿಸಬೇಕಾದ ಕ್ರಮಗಳ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪುರಸಭೆ ಸಮುದಾಯ ಸಂಘಟನಾಧಿಕಾರಿ ಬಿ.ಮಲ್ಲಿಕಾರ್ಜುನಗೌಡ ಮಾತನಾಡಿ, ಪೌರ ಕಾರ್ಮಿಕರ ರಕ್ತ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಅಸ್ತಮಾ, ಚರ್ಮರೋಗ, ಇಸಿಜಿ ಸೇರಿ ಮುಂತಾದ ಕಾಯಿಲೆಗಳ ತಪಾಸಣೆಯನ್ನು ನಡೆಸಲಾಗುತ್ತದೆ ಎಂದರು.

ಈ ವೇಳೆ ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೋರ್ಪಡೆ, ವೀರಪ್ಪ ಪಟ್ಟಣಶೆಟ್ಟಿ, ಮುದಿಯಪ್ಪ ಮುಧೋಳ, ಕನಕಪ್ಪ ಅರಳಿಗಿಡದ, ಶರಣಪ್ಪ ಉಪ್ಪಿನಬೆಟಗೇರಿ, ರಫೀಕ್ ತೋರಗಲ್, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ, ಶ್ರೀಧರ ಬಿದರಳ್ಳಿ, ಸಿದ್ದಣ್ಣ ಚೋಳಿನ, ಗುಲಾಂ ಹುನಗುಂದ, ಅಧಿಕಾರಿಗಳಾದ ಶಿವಕುಮಾರ ಇಲಾಳ, ರಾಘವೇಂದ್ರ ಮಂತಾ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img