ಗದಗ: 26 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಬಂಧಿಸಲಾಗಿದ್ದ ಇಬ್ಬರು ಆರೋಪಿಗಳ ಬಳಿಕ ಮತ್ತೂ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಗದಗ ಎಸ್.ಎಂ. ಕೃಷ್ಣನಗರದ ನಿವಾಸಿಯಾದ ಯುವತಿ ಮೇಲೆ ಇಬ್ಬರು ಆರೋಪಿಗಳು ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜು.26ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿ ಮೂರು ತಿಂಗಳ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಗರ್ಭಪಾತ ಮಾಡಿಸಲು ಕೆಲವರು ಸಹಕರಿಸಿರುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಭಪಾತಕ್ಕೆ ಸಹಕಾರ ಆರೋಪ:
ಪ್ರಕರಣದ ಮುಂದಿನ ತನಿಖೆಯಲ್ಲಿ ಗರ್ಭಪಾತದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆನ್ನಲಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಆರ್ಎಂಪಿ ವೈದ್ಯ ಹಾಗೂ ನರ್ಸ್ ಕೂಡ ಸೇರಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಆರ್ಎಮ್ಪಿ ವೈದ್ಯ, ನರ್ಸ್ ಬಂಧನ:
ಪೊಲೀಸ್ ಪ್ರಕಟಣೆಯ ಪ್ರಕಾರ, ಬೆಟಗೇರಿಯ ಸಿಕಂದರ್ ಗುಲಾಬಸಾಬ ಬೇಪಾರಿ, ಶಬ್ಬೀರ ಅಹ್ಮದ್ @ ಜೂನಸಾಬ್ ಮಹ್ಮದ್ ರಫೀಕ್ ಲಂಗೂಟಿ, ಪ್ರದೀಪ್ ತಂದೆ ಸಾಗರ ನವಲೇಕರ್, ಭರತ ತಂದೆ ಮಹಾದೇವಪ್ಪ ಕೊರವರ, ಸಂದೀಪ್ ತಂದೆ ಸಾಗರ ನವಲೇಕರ್, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ಆರ್ಎಂಪಿ ವೈದ್ಯ ನಾಗರಾಜ ತಂದೆ ಚಿದಾನಂದ ಕಮತರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ಸ್ಟಾಫ್ ನರ್ಸ್ ರೇಖಾ ತಂದೆ ಫಕೀರಪ್ಪ ಶಿರಹಟ್ಟಿ ಎಂಬ ಏಳು ಮಂದಿಯನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ತನಿಖೆಯ ವೇಳೆ ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಲ್.ಕೆ. ಜೂಲಕಟ್ಟಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.



