ದೇವನಹಳ್ಳಿ: ಬ್ಯಾಂಕ್ ಮುಂದೆ ಕಳೆದ ಮೂರು ದಿನಗಳಿಂದ ನಿಂತಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ದೇವನಹಳ್ಳಿಯ ವಿಜಯಪುರ ಕ್ರಾಸ್ ಬಳಿಯ ಯೂನಿಯನ್ ಬ್ಯಾಂಕ್ ಮುಂದೆ KA 03 MS 1953 ನೋಂದಣಿ ಸಂಖ್ಯೆಯ ವೋಕ್ಸ್ವ್ಯಾಗನ್ ಕಾರು ಮೂರು ದಿನಗಳಿಂದ ನಿಂತಿತ್ತು. ಇಂದು ಕಾರನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಒಳಗಡೆ ವ್ಯಕ್ತಿಯ ಮೃತದೇಹ ಇರುವುದು ಬೆಳಕಿಗೆ ಬಂದಿದೆ.
ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸೋಕೋ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಅಮರ್ಚಂದ್ (45) ಎಂದು ಗುರುತಿಸಲಾಗಿದೆ. ಕಾರಿನೊಳಗೆ ಮದ್ಯದ ಬಾಟಲಿಯೂ ಪತ್ತೆಯಾಗಿದೆ. ಮದ್ಯ ಸೇವಿಸಿ ಕಾರಿನ ಗ್ಲಾಸ್ಗಳನ್ನು ಮುಚ್ಚಿಕೊಂಡು ಮಲಗಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.









