ಬೆಂಗಳೂರು: ಕರ್ನಾಟಕದಲ್ಲಿ ಇ20 ಪೆಟ್ರೋಲ್ನ ಗುಣಮಟ್ಟ ಮತ್ತು ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಿನ ವಾಕ್ಸಮರ ಮುಂದುವರಿದಿದೆ. ಈ ಮಧ್ಯೆ, ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ಇ20 ಪೆಟ್ರೋಲ್ ನೀತಿಯಲ್ಲಿ ತುರ್ತು ತಿದ್ದುಪಡಿ ಮಾಡುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗಿರುವ ಸಾಧ್ಯತೆಯ ಬಗ್ಗೆ ಪ್ರಯೋಗಾಲಯದ ವರದಿಗಳ ಸಮೇತ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
14 ಮಾದರಿಗಳಲ್ಲಿ 11ರಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆ?
ಪತ್ರದಲ್ಲಿ 63 ಪೆಟ್ರೋಲ್ ಬಂಕ್ಗಳಲ್ಲಿ ಪರಿಶೀಲನೆ ನಡೆಸಿರುವುದನ್ನು ಉಲ್ಲೇಖಿಸಿರುವ ರಿಜ್ವಾನ್ ಅರ್ಷದ್, ತೈಲ ಕಂಪನಿಗಳು ನೀಡಿದ 42 ವರದಿಗಳಲ್ಲಿ ಎಥೆನಾಲ್ ಮಿಶ್ರಣದ ಶೇಕಡಾವಾರು ಪ್ರಮಾಣವನ್ನು ನಮೂದಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಯೋಗಾಲಯದಲ್ಲಿ ಪರೀಕ್ಷಿಸಿದ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಕಂಡುಬಂದಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.31.2ರಷ್ಟಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣದ ಮಾಹಿತಿ ಕಡ್ಡಾಯಗೊಳಿಸಲು ಮನವಿ
ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಎಷ್ಟಿದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವ ಫಲಕಗಳನ್ನು ಅಳವಡಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ. ಅಲ್ಲದೆ, ಗ್ರಾಹಕರಿಗೆ ನೀಡುವ ಬಿಲ್ನಲ್ಲಿಯೂ ಎಥೆನಾಲ್ ಪ್ರಮಾಣವನ್ನು ನಮೂದಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದರ ಜತೆಗೆ ಪೆಟ್ರೋಲ್ ಬಂಕ್ಗಳಲ್ಲಿ ಇ10 ಹಾಗೂ ಎಥೆನಾಲ್ ರಹಿತ ಪೆಟ್ರೋಲ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಪೆಟ್ರೋಲ್ನ ಗುಣಮಟ್ಟ ಮತ್ತು ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಪರೀಕ್ಷಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ವಾಹನ ಹಾಳಾದರೆ ಪರಿಹಾರ ನೀಡಲು ಇ20 ನಿಧಿ ಸ್ಥಾಪನೆಗೆ ಆಗ್ರಹ
ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡುವ ಉದ್ದೇಶದಿಂದ ಪ್ರತ್ಯೇಕವಾಗಿ ಇ20 ನಿಧಿ ಸ್ಥಾಪಿಸಬೇಕು ಎಂದು ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
ಎಥೆನಾಲ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪ್ರಯೋಗಾಲಯದ ವರದಿಗಳ ಸತ್ಯಾಸತ್ಯತೆಯನ್ನು ರಾಜಕೀಯ ಮೇಲಾಟದ ದೃಷ್ಟಿಯಿಂದ ನೋಡದೆ, ಜನರ ಹಿತಾಸಕ್ತಿಯ ಆಧಾರದಲ್ಲಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಸಾಮಾನ್ಯ ಜನರು ಕಷ್ಟಪಟ್ಟು ದುಡಿದು ಉಳಿಸಿದ ಹಣದಲ್ಲಿ ಕಾರು ಸೇರಿದಂತೆ ವಾಹನಗಳನ್ನು ಖರೀದಿಸುತ್ತಾರೆ. ಇಂಧನದ ಗುಣಮಟ್ಟದಿಂದ ವಾಹನಗಳಿಗೆ ಹಾನಿಯಾದರೆ ಅದರ ಹೊಣೆಗಾರಿಕೆ ಮತ್ತು ಪರಿಹಾರದ ವ್ಯವಸ್ಥೆ ಇರಬೇಕು. ಹೀಗಾಗಿ ಜನರ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸಿ ಇ20 ನೀತಿಗೆ ತುರ್ತಾಗಿ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.









