ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಹತ್ಯೆ ನಡೆದ ಕ್ಷಣದಿಂದ ಹಿಡಿದು ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ಕಾರಿನಲ್ಲಿ ಸಾಗಿಸಿದವರೆಗಿನ ಪ್ರತಿಯೊಂದು ಹಂತವನ್ನೂ ಆರೋಪಿ ಇಂದುಶೇಖರ್ನಿಂದಲೇ ಮರುಸೃಷ್ಟಿ ಮಾಡಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ತಂದೆ ಮತ್ತು ಮಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಪ್ರಕರಣದ ತನಿಖೆ ವೇಳೆ ಸರಣಿ ಹತ್ಯೆಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿವೆ ಎನ್ನಲಾಗಿದೆ. ಆರೋಪಿ ಇಂದುಶೇಖರ್ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಆತನಿಂದಲೇ ಸಂಪೂರ್ಣ ಅಪರಾಧ ಕೃತ್ಯದ ದೃಶ್ಯಗಳನ್ನು ಮರುಸೃಷ್ಟಿ ಮಾಡಿಸಿದ್ದಾರೆ.
ಊಟಕ್ಕೆ ಕೂರಿಸಿದ್ದರಿಂದ ಮೃತದೇಹ ಸಾಗಿಸುವವರೆಗೂ ಮರುಸೃಷ್ಟಿ
ಮೃತರನ್ನು ಮನೆಗೆ ಕರೆಸಿಕೊಂಡಿದ್ದು, ಅವರಿಗೆ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮಲಗಲು ಸ್ಥಳ ಕಲ್ಪಿಸಿದ್ದು ಸೇರಿದಂತೆ ಹತ್ಯೆಗೂ ಮುನ್ನ ನಡೆದ ಪ್ರತಿಯೊಂದು ಘಟನೆಯನ್ನೂ ಪೊಲೀಸರು ಮರುಸೃಷ್ಟಿ ಮಾಡಿಸಿದ್ದಾರೆ.
ಬಳಿಕ ಹತ್ಯೆಗೆ ರೂಪಿಸಿದ್ದ ಯೋಜನೆ, ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು, ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿದ್ದು, ಮನೆಯಿಂದ ಕೆಳಗೆ ಸಾಗಿಸಿ ಕಾರಿನಲ್ಲಿ ಇರಿಸಿದ್ದು ಸೇರಿದಂತೆ ಸಂಪೂರ್ಣ ಘಟನಾವಳಿಗಳನ್ನು ಆರೋಪಿ ಮೂಲಕವೇ ತೋರಿಸಿಕೊಳ್ಳಲಾಗಿದೆ.
ತನಿಖೆಯ ಭಾಗವಾಗಿ ಈ ಎಲ್ಲ ದೃಶ್ಯಗಳನ್ನು ಪೊಲೀಸರು ವಿಡಿಯೋಗ್ರಫಿ ಮಾಡಿಕೊಂಡಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ಸಾಕ್ಷ್ಯ ಸಂಗ್ರಹಕ್ಕೆ ಈ ದೃಶ್ಯಗಳು ನೆರವಾಗಲಿವೆ.
ಮೊಬೈಲ್ ಫೋನ್ಗಳು, ಆಡಿಯೋ ದಾಖಲೆಗಳ ಪರಿಶೀಲನೆ
ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮೃತರ ಎಲ್ಲಾ ಮೊಬೈಲ್ ಫೋನ್ಗಳನ್ನು ತಾಂತ್ರಿಕ ಪರಿಶೀಲನೆಗಾಗಿ ರಿಟ್ರೀವ್ಗೆ ಕಳುಹಿಸಲಾಗಿದೆ.
ಇನ್ನು ಆರೋಪಿ ಇಂದುಶೇಖರ್ನ ಟ್ರಾವೆಲ್ ಹಿಸ್ಟರಿ ಆಧರಿಸಿ ಪೊಲೀಸರು ಮ್ಯಾಪಿಂಗ್ ಕಾರ್ಯ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿರುವ ಎಲ್ಲಾ ಆಡಿಯೋ ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನಿಸಲಾಗಿದೆ.
ಎಲ್ಲಾ ಸ್ಥಳಗಳಲ್ಲೂ ಮಹಜರು ಪೂರ್ಣ
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸ್ಥಳಗಳಲ್ಲೂ ರಾಜಾಜಿನಗರ ಪೊಲೀಸರು ಮಹಜರು ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಘಟನೆಯ ಪ್ರತಿಯೊಂದು ಹಂತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಈ ನಡುವೆ ಆರೋಪಿ ಇಂದುಶೇಖರ್ನ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಪ್ರಕರಣದ ಹಿಂದಿನ ಉದ್ದೇಶ, ಹತ್ಯೆಯ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಸಂಬಂಧಿತ ಅಂಶಗಳ ಕುರಿತು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.










