ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ವಿಶ್ವಕರ್ಮರು ತಮ್ಮ ಕುಲ ಕಸುಬನ್ನು ಆಧುನಿಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸರಕಾರದಿಂದ ದೊರೆಯುವ ಸಾಲ ಸೌಲಭ್ಯದೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನರಗುಂದದ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಸಲಹೆ ನೀಡಿದರು.
ಇಲ್ಲಿಯ ಕಾಳಿಕಾ ಕಮ್ಮಟೇಶ್ವರ ಸೇವಾ ಟ್ರಸ್ಟ್ ಕಮಿಟಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಕಲೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ವಿಶ್ವಕರ್ಮರ ಪಾತ್ರ ಮಹತ್ವದಾಗಿದೆ. ಇದನ್ನು ಅರಿತ ಮೋದಿಯವರ ಕೇಂದ್ರ ಸರಕಾರ ದೇಶದ 18 ಕುಲಕಸುಬುದಾರ ವಿಶ್ವಕರ್ಮರ ಆರ್ಥಿಕ ಬೆಳವಣಿಗೆಗೆ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ವಿಶ್ವಕರ್ಮರು ಬಡವ-ಬಲ್ಲಿದ, ದೀನ-ದಲಿತರೆನ್ನದೇ ಎಲ್ಲ ಸಮುದಾಯದವರಿಗೂ ತಮ್ಮ ಕುಲ ಕಸುಬಿನ ಉಪಕರಣವನ್ನು ಮಾಡಿಕೊಡಲು ಹಿಂಜರಿಯುವುದಿಲ್ಲ. ನಿಜಾರ್ಥದಲ್ಲಿ ಅವರು ಭಾವೈಕ್ಯತೆಯುಳ್ಳವರಾಗಿದ್ದಾರೆ ಎಂದರು.
ಗ್ರಾ.ಪಂ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿಶ್ವಕರ್ಮರು ಇಲ್ಲದ ಗ್ರಾಮ ಬಹುತೇಕ ನಮ್ಮ ದೇಶದಲ್ಲಿಯೇ ಇಲ್ಲ. ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುವ ಅವರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯೋಜನೆಯನ್ನು ಜಾರಿಗೆ ತಂದರೂ ಸಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ಯುವಕರು ಗಮನ ಹರಿಸಬೇಕು. ಕಲ್ಯಾಣ ಮಂಟಪ ನಿರ್ಮಾಣಕ್ಕೆ ನಿವೇಶನ ಬೇಡಿಕೆ ಇಟ್ಟಿದ್ದು, ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಅಲ್ಲಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು, ನಿವೃತ್ತ ಶಿಕ್ಷಕ ವಿ.ಆಯ್. ಬಡಿಗೇರ ಮಾತನಾಡಿದರು. ಸೇವೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಜರುಗಿತು. ಈರಣ್ಣ ಕಂಚಗಾರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಬಡಿಗೇರ ಸಂಗಡಿಗರು ಪ್ರಾರ್ಥಿಸಿದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಬಿ.ಜೆ.ಪಿ ಮುಖಂಡರಾದ ವಸಂತ ಮೇಟಿ, ಪ್ರದೀಪ ನವಲಗುಂದ, ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಬಸವರಾಜ ಯಲಿಶಿರುಂದ, ವಿರೂಪಾಕ್ಷಪ್ಪ ಬೆಟಗೇರಿ, ಅಮೀನಾ ಹುಬ್ಬಳ್ಳಿ, ರಜೀಯಾಬೇಗಂ ತಹಸೀಲ್ದಾರ, ಫಕ್ಕೀರಮ್ಮ ಬೇಲೇರಿ, ಮಾಜಿ ಸದಸ್ಯರಾದ ಕುಬೇರಪ್ಪ ಕಮ್ಮಾರ, ಸುಮಾ ಬಡಿಗೇರ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ದೇವೆಂದ್ರಪ್ಪ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಅರಹುಣಶಿ ನಿರೂಪಿಸಿದರು. ಗೋವಿಂದಪ್ಪ ಬಡಿಗೇರ ವಂದಿಸಿದರು.
ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಮಾತನಾಡಿ, ತಮ್ಮ ಜೀವನೋಪಾಯಕ್ಕಾಗಿ ಕಬ್ಬಿಣ, ಕಲ್ಲು ಕಟ್ಟಿಗೆ, ಮಣ್ಣಿನಲ್ಲಿ ತಮ್ಮ ಕೌಶಲ್ಯದಿಂದ ಹಲವಾರು ಕಲಾಕೃತಿಗಳನ್ನು ತಯಾರಿಸುತ್ತ ಶ್ರಮಜೀವಿಗಳಾಗಿರುವ ವಿಶ್ವಕರ್ಮರು ಸಮಾಜದಲ್ಲಿ ಉತ್ತಮ ಸ್ನೇಹ ಸಂಬಂದವನ್ನು ಇಟ್ಟುಕೊಂಡಿದ್ದಾರೆ. ಇವರು ಆರ್ಥಿಕವಾಗಿ ಹಿಂದುಳಿದವರಿದ್ದು, ಇಲ್ಲಿಯ 70 ಕುಟುಂಬಗಳಿಗೆ ಅವರು ತಯಾರಿಸಿರುವ ಉಪಕರಣಗಳ ಸಂರಕ್ಷಣೆಗಾಗಿ ಸರಕಾರ ಬೃಹತ್ ಶೆಡ್ ನಿರ್ಮಾಣ ಮಾಡಬೇಕಿದೆ ಎಂದರು.