ವಿಜಯಸಾಕ್ಷಿ ಸುದ್ದಿ, ರೋಣ : ಈ ಹಿಂದೆ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಉಗ್ರಾಣ ಕಟ್ಟಡದ ವಿಚಾರವಾಗಿ ಶಾಸಕ ಜಿ.ಎಸ್. ಪಾಟೀಲರು ಬೀಜ ನಿಗಮದ ವ್ಯವಸ್ಥಾಪಕ ಪ್ರಮೋದ ಕುಲಕರ್ಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಎಪಿಎಂಸಿ ಆವರಣದಲ್ಲಿ ಜರುಗಿದ ಹಿಂಗಾರು ಬಿತ್ತನೆ ಬೀಜ ವಿತರಣೆ ಸಮಾರಂಭದಲ್ಲಿ ನಡೆಯಿತು.
ಅಲ್ಲಿ ಕಟ್ಟಡ ನಿರ್ಮಿಸಿದ್ದರೂ ಇಂದಿಗೂ ರೈತರಿಗೆ ಅನುಕೂಲವಾಗಿಲ್ಲ. ಮುಖ್ಯವಾಗಿ ಸ್ವತಃ ನೀವೇ ನಿರ್ಮಿಸಿದ ಕಟ್ಟಡದ ಬಳಿ ಹೋಗಿಲ್ಲ. ಅಲ್ಲಿನ ಸ್ಥಿತಿ ಹೇಗಿದೆ ಎಂಬ ತಿಳುವಳಿಕೆ ಕೂಡ ನಿಮಗಿಲ್ಲ. ಯಾವ ಕಾರಣಕ್ಕೆ ಉಗ್ರಾಣ ಕಟ್ಟಡ ರೈತರಿಗೆ ಲಭ್ಯವಾಗಿಲ್ಲ ಎಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಆಗ ಪ್ರಮೋದ ಕುಲಕರ್ಣಿ ಪ್ರತಿಕ್ರಿತಿಸಿ, ಅಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಕಾರಣ ಹೇಳುತ್ತಿದ್ದಂತೆ, ಸಮಸ್ಯೆಗಳಿವೆ ಎನ್ನುವ ವಿಚಾರ ತಿಳಿದಿದ್ದರೂ ಸಹ ಕಟ್ಟಡ ಏಕೆ ನಿರ್ಮಿಸಿದಿರಿ, ಈ ಹಿಂದೆ ನಮ್ಮ ತಾಲೂಕಿಗೆ ಮಂಜೂರಾಗಿದ್ದ ವಿದ್ಯಾಲಯವೂ ಬೇರೆ ಕಡೆಗೆ ಹೋಯಿತು. ಈಗ ಈ ಕಟ್ಟಡವೂ ಅದರಂತೆಯೇ ಆಗಬೇಕೇ, ನಿಮಗೆ ಕರ್ತವ್ಯದ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಒಂದು ದಿನವಾದರೂ ಅಲ್ಲಿನ ವಸ್ತುಸ್ಥಿತಿಯನ್ನು ನನಗೆ ತಿಳಿಸಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದರು.