ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಪೂರೈಸುವ ಹಿಂಗಾರಿ ಹಿಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಸೋಮವಾರ ಶಾಸಕ ಡಾ.ಚಂದ್ರು ಲಮಾಣಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅಗತ್ಯವಿಲ್ಲದವರಿಗೂ ಹಲವು ಉಚಿತ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅನ್ನ ನೀಡುವ ರೈತರಿಗೆ ಬಿತ್ತನೆ ಬೀಜಗಳ ಬೆಲೆಯನ್ನು ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಉಚಿತ ಬಿತ್ತನೆ ಬೀಜ, ಸಹಾಯಧನದಡಿ ಗೊಬ್ಬರ ವಿತರಣೆ ಮಾಡಿದರೆ ಉಪಯುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಕೃಷಿ ಸಚಿವರು ಗಮನ ಹರಿಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಮಾತನಾಡಿ, ಲಕ್ಷ್ಮೇಶ್ವರ ಕೃಷಿ ಕೇಂದ್ರದಲ್ಲಿ 800 ಕ್ವಿಂಟಲ್ ಕಡಲೆ, 20 ಕ್ವಿಂಟಲ್ ಜೋಳ, 5 ಕ್ವಿಂಟಲ್ ಕುಸಬಿ ಬೀಜ ದಾಸ್ತಾನಿದೆ. ಸಬ್ಸಿಡಿ ಕಡಿತಗೊಳಿಸಿ 20 ಕೆಜಿ ಕಡಲೆ ಪಾಕೀಟಗೆ 1470 ರೂ, 3 ಕೆಜಿ ಜೋಳ 169.50ಪೈಸೆಗೆ ಸಿಗುತ್ತದೆ. 300ರೂಗೆ 5 ಕೆ.ಜಿ ಕುಸುಬಿ ಕೊಡಲಾಗುತ್ತಿದೆ.
ಅವಶ್ಯಕ ದಾಖಲೆಗಳನ್ನು ಸಲ್ಲಿಸಿ ರಿಯಾಯಿತಿ ದರದಲ್ಲಿ ಬೀಜ ಖರೀದಿಸಿ. ಹಿಂಗಾರಿನ ಬಿತ್ತನೆಗೆ ಸಕಾಲವಾಗಿದ್ದರೂ ಸದ್ಯ ಭೂಮಿಯಲ್ಲಿ ಬೀಜ ಮೊಳೆಯಲು ತೇವಾಂಶವಿಲ್ಲ. ಮಳೆಯ ವಾತಾವರಣವಿದ್ದು ಒಂದಷ್ಟು ಮಳೆಯಾದ ಮೇಲೆ ಬಿತ್ತಿದರೆ ಉತ್ತಮ. ರೈತ ಸಂಪರ್ಕ ಕೇಂದ್ರದಲ್ಲಿನ ಪ್ರಮಾಣೀಕೃತ ಬೀಜದ ಬದಲಾಗಿ ರೈತರೇ ಸಂಗ್ರಹಿಸಿಟ್ಟ ಬೀಜ ಬಿತ್ತುವ ಮೊದಲು ಗುಣಮಟ್ಟ ಪರಿಶೀಲಿಸಿ ಮತ್ತು ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ಅಧಿಕಾರಿ ಎಂ.ಎಚ್. ಹಣಗಿ, ಸಿಬ್ಬಂದಿ ಅಮಿತ್ ಹಾಲೇವಾಡಿಮಠ, ಹರೀಶ ಭದ್ರಾಪುರ, ದೇವರಾಜ ಅತಡಕರ, ಮಹೇಶ ನಂದೆಣ್ಣವರ, ಸಿದ್ದು ಕನವಳ್ಳಿ ಸೇರಿದಂತೆ ರೈತರು ಇದ್ದರು.