ವಿಜಯಸಾಕ್ಷಿ ಸುದ್ದಿ, ಮೈಸೂರು
ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಶನಿವಾರ ಮೈಸೂರಿಗೆ ಆಗಮಿಸಿದರು. ಈ ವೇಳೆ ಆಟೋಗ್ರಾಫ್, ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು.
ಈ ಸಂದರ್ಭದಲ್ಲಿ 1790ರಲ್ಲಿ ತಮಿಳುನಾಡಿನ ಶಿವಗಂಗೆಯಯಲ್ಲಿ
16 ಬಾಲೆ ಕುಯಿಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ
ಯಶೋಗಾಥೆ ಬೆಂಕಿ ಚೆಂಡು ಕುಯಿಲಿ ಕುರಿತ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನೈಜ ಇತಿಹಾಸ ಮರೆಮಾಚುವಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ.
ಇತಿಹಾಸದ ತಿಳಿವಳಿಕೆಯಲ್ಲಿ ಹಿಂದೆ ಸಾಗಿ ಪ್ರತಿ 6 ತಿಂಗಳಿಗೊಮ್ಮೆ ದೇಶದಲ್ಲಿ ಅಶಾಂತಿ ಉಂಟಾಗುತ್ತಿದೆ ಎಂದು ತಿಳಿಸಿದರು.
CAA ಮತ್ತು ಕೃಷಿ ಕಾಯ್ದೆಗಳ ಮೂಲಕ ಅಶಾಂತಿ ಉಂಟಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣ ಭಾಗದ ಗಡಿಯಲ್ಲಿ 7 ಲಕ್ಷ ರೈತರನ್ನು ತಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇತಿಹಾಸ ತಿಳಿಯುವವರಾಗಿ ಹಾಗೂ ನಿಜವಾದ ಭಾರತೀಯರಾಗಿ ಈ ಕಾಯ್ದೆಗಳನ್ನು ಬೆಂಬಲಿಸುವುದು ಸೂಕ್ತ ಎಂದು ಕೃಷಿ ಕಾಯ್ದೆಯ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಿ ಅಧಿಕಾರ ನಡೆಸಿದ ವ್ಯಕ್ತಿಗಳ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿದೆ.ಆದರೆ, ಕುಯಿಲಿ, ಮುರುದನ್ ಸಹೋದರರು ಮತ್ತು ವೇಲುನಾಚಿಯರ್, ವೀರಪಾಂಡ್ಯ, ರಾಜ ರಾಜ ಚೋಳ ಅವರಂತಹ ನಾಯಕರನ್ನ ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಮೆರೆಮಾಚಿದೆ ಎಂದು ಸಾಂಸ್ಕೃತಿಕ ನಗರದಲ್ಲಿ ನಿಂತು ದ್ರಾವಿಡ್ ರಾಜಕಾರಣ ಟೀಕಿಸಿದರು.
ಕುಯಿಲಿ ಪುಸ್ತಕವನ್ನು ಕನ್ನಡ ಭಾಷೆಯಿಂದ ತಮಿಳಿಗೆ ಅನುವಾದ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಕುಯಿಲಿ, ಅಮೃತಯ್ಯ ಅಂತಹ ವೀರ ಹೋರಾಟಗಾರರು ಪ್ರತಿ ಹಳ್ಳಿಗಳಲ್ಲೂ ಇದ್ದಾರೆ. ಅಂತವರನ್ನ ಗುರುತಿಸುವ ಕಾರ್ಯ ಮುಂದುವರಿಯಲಿ ಎಂದು ಅಣ್ಣಾಮಲೈ ಭರವಸೆ ನೀಡಿದರು.