ವಿಜಯಸಾಕ್ಷಿ ಸುದ್ದಿ, ಗದಗ : ಸ್ತ್ರೀಯು ಅಬಲೆಯಲ್ಲ ಸಬಲೆಯಾಗಿದ್ದು, ಅವಳಗಿರುವ ಸ್ವಾತಂತ್ರತ್ರ್ಯವು ಸ್ವೇಚ್ಛಾಚಾರವಾಗದಂತೆ ಜಾಗೃತೆ ವಹಿಸುವುದು ಮಹಿಳೆಯ ಕರ್ತವ್ಯವಾಗಿದೆಯೆಂದು ಶಿರಸಿ ಜಿಲ್ಲಾ ರಾಷ್ಟ್ರ ಸೇವಿಕಾ ಸಮಿತಿ ಕಾರ್ಯವಾಹಿಕಾ ಶ್ರೀದೇವಿ ದೇಶಪಾಂಡೆ ಅಭಿಪ್ರಾಯಪಟ್ಟರು.
ಗದಗ ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ನೇತೃತ್ವದಲ್ಲಿ ನಡೆದ ಶಸ್ತ್ರಪೂಜನ ಹಾಗೂ ಧರ್ಮಜಾಗೃತಿ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.
ವೇದಕಾಲದಿಂದಲೂ ಮಹಿಳೆಗೆ ಪೂಜ್ಯಸ್ಥಾನವಿದ್ದು, ಮಾತೃ ದೇವೋಭವ ಎಂದು ಉಲ್ಲೇಖಿಸಲಾಗಿದೆ. ಎಲ್ಲಿ ಮಹಿಳೆಗೆ ಗೌರವ ಇರುವದೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ ಎಂದು ಹೇಳಲಾಗಿದೆ. ಇದನ್ನು ಹಿಂದೂ ಧರ್ಮದಲ್ಲಿ ಮಾತ್ರ ನಾವು ಕಾಣುತ್ತೇವೆ ಎಂದು ಹೇಳಿದರು.
ಮೆಕಾಲೆೆ ಶಿಕ್ಷಣಕ್ಕೆ ಮಾರು ಹೋಗಿರುವ ನಾವು ಸನಾತನ ಧರ್ಮ ಶಿಕ್ಷಣದ ಕೊರತೆಯಿಂದ ಸ್ವೇಚ್ಛಾಚಾರಿಗಳಾಗಿದ್ದು, ಇದು ದೇಶಕ್ಕೆ ಮತ್ತು ಧರ್ಮಕ್ಕೆ ಅಪಾಯಕಾರಿ ಎಂದು ಎಚ್ಚರಿಸಿದರು.
ಧರ್ಮಕಾರ್ಯದ ಜೊತೆಗೆ ದೇಶ ರಕ್ಷಣೆಗೆ ಹೋರಾಡಿದ ಮಹಿಳೆಯರು ನಮಗೆ ಪ್ರಾತಃಸ್ಮರಣೀಯರು. ಶಿವಾಜಿ ಮಹಾರಾಜರಲ್ಲಿ ಕ್ಷಾತ್ರ ತೇಜಸ್ಸು ತುಂಬಿ ಹಿಂದವೀ ಸಾಮ್ರಾಜ್ಯ ಸ್ಥಾಪಿಸಲು ಕಾರಣರಾದ ಜೀಜಾಮಾತಾ, ಮೊಘಲರಿಂದ ದ್ವಂಸಗೊಂಡಿದ್ದ ದೇವಸ್ಥಾನಗಳನ್ನು ಪುನಃ ಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್, ರಾಣಿ ದುರ್ಗಾವತಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ರಾಣಿ ಚನ್ನಮ್ಮಾ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಹೀಗೆ ಸಾವಿರಾರು ಸಂಖ್ಯೆಯ ಸಾಹಸಿಯರು ನಮಗೆ ಆದರ್ಶವಾಗಬೇಕು.
ಇದೇ ಸಂದರ್ಭದಲ್ಲಿ ಪಿಎಸ್‌ಐ ರೇಣುಕಾ ಮುಂಡೇವಾಡೆ ಮಹಿಳೆಯರ ಜಾಗೃತೆಗಾಗಿ ಸಲಹೆ-ಸೂಚನೆ ನೀಡಿದರು. ಪ್ರಾರಂಭದಲ್ಲಿ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಧರ್ಮಸಭೆಯ ಅಧ್ಯಕ್ಷತೆಯನ್ನು ವಾಸವಿ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಆಶಾಲತಾ ಸಂಪಗಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿ.ಹಿಂ.ಪ. ಜಿಲ್ಲಾ ಉಪಾಧ್ಯಕ್ಷರಾದ ರಾಣಿ ಚಂದಾವರಿ, ಮಾಧವಿ ಕಾಲವಾಡ, ರೇಣುಕಾ ಕಲಬುರ್ಗಿ, ಧರ್ಮದಾಸ ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ರಮೇಶ ಕದಂ, ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಕೋಶಾಧ್ಯಕ್ಷ ಮಾರುತಿ ಪವಾರ, ವಾಸವಿ ಮಹಿಳಾ ಮಂಡಳದ ಸರ್ವ ಸದಸ್ಯರು, ನಗರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.
ನಿಖಿತಾ ಸುತಾರ ಪ್ರಾರ್ಥನೆಗೈದರು. ಪ್ರಥಾ ಪವಾರ ಸ್ವಾಗತಿಸಿ, ಪರಿಚಯಿಸಿದರು. ಸಂಜಾನಾ ಬನಹಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅರುಣಾ ಗುಂಡಗಟ್ಟಿ ವಂದಿಸಿದರು. ಲಾವಣ್ಯ ಭಾಂಡಗೆ ಹಾಗೂ ಮೇಘಾ ಭಾಂಡಗೆ ಶಾಂತಿಮಂತ್ರ ಹಾಗೂ ಜಯಘೋಷ ನೆರವೇರಿಸಿದರು.
ಮಹಿಳೆಯಾದವಳು ತನ್ನ ವೈಯಕ್ತಿಕ ನೋವನ್ನು ನುಂಗಿ ಕುಟುಂಬ, ಸಮಾಜ, ರಾಷ್ಟ್ರಧರ್ಮ ಸಂರಕ್ಷಣೆಗೆ ಸೇವೆ, ಸುರಕ್ಷೆ, ನ್ಯಾಯಪಾಲನೆ, ಸೈನ್ಯ, ವಿಜ್ಞಾನ, ವ್ಯವಹಾರ, ಶಿಕ್ಷಣ, ರಾಜಕೀಯ, ಆಧ್ಯಾತ್ಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರವೇಶಿಸಿ ದೇಶ-ಧರ್ಮ ಕಾರ್ಯಗಳಲ್ಲಿ ಕೈ ಜೋಡಿಸುತ್ತಿರುವರು ನಾವು ಕಾಣುತ್ತಿದ್ದು, ಇದರಿಂದ ಮಹಿಳೆ ಅಬಲೆಯಲ್ಲ ಸಬಲೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಶ್ರೀದೇವಿ ದೇಶಪಾಂಡೆ ತಿಳಿಸಿದರು.
Advertisement