ಹೂ ಮನದ ಸ್ವಾಭಿಮಾನಿ ಹಜರೇಸಾಬ

0
Introductory article for book launch on A. 20th
Spread the love

ಜೀವಪರ್ಯಂತ ಸಂಕಷ್ಟಗಳ ಸರಮಾಲೆಯನ್ನೇ ಧರಿಸಿದರೂ ಜೀವನ್ಮುಖಿಯಾಗಿ `ಬದುಕು ಛಂದ ಗೀತ’ವಾಗಿಸಲು ಅಕ್ಷರಶಃ ಪ್ರಯತ್ನಪಟ್ಟವರು ನನ್ನ ನೆಚ್ಚಿನ ನೇಹಿಗ ಕವಿ, ಕತೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನ್ಯಾಸಕ ಹಜರೇಸಾಬ ಬಿ.ನದಾಫ್‌ರವರು. ಮುಗ್ಧ ಮಗುವಿನ ಮನಸು, ದಮನಿ ದಮನಿಯಲಿ ಭ್ರಾತೃತ್ವದ ಸೆಲೆ ಉಕ್ಕುತ್ತಿತ್ತು. ಅಲ್ಲಾಹ-ಅಲ್ಲಮ ಒಂದೇ ಎನ್ನುವ ಬಲವಾದ ನಂಬಿಕೆ ಇಟ್ಟುಕೊಂಡ ಸ್ನೇಹ ಜೀವಿ, ಭಾವುಕ ಜೀವಿ.

Advertisement

ಸವಣೂರು ಲಾಲಶಾ ಕಟ್ಟಾದ ಅಪ್ಪಟ ಅಪರಂಜಿ. ವಿದ್ಯಾಭಾರತಿ ಪ್ರೌಢಶಾಲೆ, ಮಸ್ಜೀದ ಕಾಲೇಜಗಳೆಂದರೆ ಅವರ ಪಾಲಿನ ಜ್ಞಾನಕಾಶಿ. ಐತಿಹಾಸಿಕ ದೊಡ್ಡ ಹುಣಸೆಮರದ ನೆರಳು ಹಜರೇಸಾಬರ ಬೋಧಿವೃಕ್ಷ.

ಹುಲಗೂರ ಹಜರೇಶಾ ಖಾದ್ರಿ, ಶಿಶುನಾಳ ಶರೀಫರ ಗದ್ದುಗೆ, ಹುರುಳುಕುಪ್ಪಿ ಛಿಲ್ಲಾ (ಗವಿ) ಪವಿತ್ರ ನೆಚ್ಚಿನ ಧಾರ್ಮಿಕ ಕ್ಷೇತ್ರಗಳು. ಮೋತಿ ತಲಾಬ್‌ನ ಹುಣ್ಣಿಮೆ ಹಜರೇಸಾಬರಿಗೆ ದಾಲ ಸರೋವರದಂತೆ ಗೋಚರಿಸುತ್ತಿತ್ತು.

ಹಜರೇಸಾಬರ ತಂದೆ ಬಾಬುಸಾಬ, ಬಾಬುದಾ, ಪೇಡೆಬಾಬಾ ಎಂದೇ ಖ್ಯಾತರು. ತಂದೆಯಿಂದ ಬಳುವಳಿಯಾಗಿ ಬಂದ ಬೆವರ ಬಿಂದುಗಳನ್ನು ಪೋಣಿಸಿಕೊಂಡು ತಲೆಯ ಮೇಲೆ ಚಿಮಣಿ ಕಟ್ಟಿಕೊಂಡು ಬಗಲಲ್ಲಿ ಅಲ್ಲಿಪಾಕ್ ಪೇಡೆ ಮಾರುವುದೆಂದರೆ ಯುವಕ ಹಜರೇಸಾಬರಿಗೆ ಎಲ್ಲಿಲ್ಲದ ಹಿಗ್ಗು. ಕುಟುಂಬದ ನಿರ್ವಹಣೆಗಾಗಿ ತಂದೆ-ತಾಯಿ ದಾದಿ ನಾನಿಯರಿಗೆ ಹೆಗಲೇಣಿಯಾಗಿ ಮಂದ ಬೆಳಕಿನಲಿ ಪಠ್ಯಪುಸ್ತಕಗಳ ಪ್ರತಿ ಅಕ್ಷರಗಳನ್ನು ಎದೆಗಿಳಿಸಿಕೊಂಡ ಜಾಣ ವಿದ್ಯಾರ್ಥಿ.

ಹೂ ಮನದ ಸ್ವಾಭಿಮಾನಿ ಗೆಳೆಯನನ್ನು ಸಮಾಜ ಅರ್ಥ ಮಾಡಿಕೊಳ್ಳಲು ಸೋತಿತು. ಸಮಾಜಮುಖಿ ಚಿಂತನೆಗಳೇ ಅವರ ಬದುಕಿಗೆ ಎರವಾದವು. ಬಡತನದ ಕಾರಣಕ್ಕೆ ಅಕ್ಷರ ವಂಚಿತ ನಿರ್ಲಕ್ಷಿತ ಮುಸ್ಲಿಂ ಸಮುದಾಯದ ಹಿನ್ನಲೆ ಅವರ ಬೆಳವಣಿಗೆಗೆ ತೊಡಕಾಗಿದ್ದವು. ಚಾಲೆಂಜ್ ಸ್ವೀಕಾರ ಮಾಡಿ ಪ್ರಗತಿಯ ಮೆಟ್ಟಿಲು ಹತ್ತಿದರು. ಹವಾಯಿ ಚಪ್ಪಲಿ ಧರಿಸುವ ಕಾರಣಕ್ಕೆ ನದಾಫ್ ಅವರಿಗೆ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಿಲ್ಲ. ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಿ.ಕೆ. ದೇವಾಡಿಗ ಅವರು ಯಾಕೆ ನಮ್ಮ ಹುಡುಗನಿಗೆ ಆಯ್ಕೆ ಮಾಡಿಕೊಳ್ಳುವದಿಲ್ಲ ಎಂದು ತಕರಾರು ಮಾಡಿದರು. ಒಂದಲ್ಲ ಮೂರು ಬಾರಿ ಆಡಳಿತ ಮಂಡಳಿ ನದಾಫ್ ಅವರಿಗೆ ಸಂದರ್ಶನ ನಡೆಸಿತ್ತು. ಅನಿವಾರ್ಯವಾಗಿ ಮೋಹನ ಮೆಣಸಿನಕಾಯಿಯವರು ನದಾಫ್‌ರನ್ನು ಆಯ್ಕೆ ಮಾಡಿಕೊಂಡರು.

ಬರವಣಿಗೆ, ಓದು, ಕನ್ನಡ, ಸಾಹಿತ್ಯ ಪರಿಷತ್ತಿನ ಸಂಘಟನೆ ಮಾಡಿದ್ದು ಇತಿಹಾಸ. ಬಿಡುವಿದ್ದಾಗಲೆಲ್ಲ ಗೆಳೆಯ ನದಾಫ್‌ರಿಗಾಗಿ ಕನ್ಯಾನ್ವೇಷಣೆಗೆ ಸಮಯ ಹೊಂದಿಸಿಕೊಳ್ಳುವ ಸಾಹಸಕ್ಕೂ ಕೈಹಾಕಿದ್ದೆವು. ಅವಿಭಜಿತ ಧಾರವಾಡ ಜಿಲ್ಲೆಯ ಸಾಹಿತ್ಯ ವಲಯ ಅವರ ಗೆಳೆಯರಾಗಿದ್ದರು.

ನಾನು ಸೇವೆ ಸಲ್ಲಿಸುತ್ತಿರುವ ಸ್ಥಳಗಳಿಗೆ ನನ್ನ ಭೇಟಿಗೆ ಆಗಾಗ ಬರುತ್ತಿರುವದು. ಎಸ್.ಎಸ್.ಎಲ್.ಸಿ. ಪರೀಕ್ಷೆ ಸ್ಕ್ವಾಡ್ ಅಧಿಕಾರಿಗಳಾಗಿ ಪ್ರತಿ ವರ್ಷ ಗದಗ ಜಿಲ್ಲೆಗೆ ಬರುವದು. ವಾರಾನುಗಟ್ಟಲೆ ನಮ್ಮ ಭೇಟಿ, ಮಾತುಕಥೆಗಳ ವಿನಿಮಯ ನಡೆಯುತ್ತಿತ್ತು. ಅವರ ಹೊಸ ಕವಿತೆಯ ಮೊದಲ ಓದುಗ ನಾನಾಗಿರುತ್ತಿದ್ದೆ. ಸಂಬಂಧದ ಕೊಂಡಿಗಳು ಕಳಚದಂತೆ ವಹಿಸುವ ಎಚ್ಚರಿಕೆ ಅವರಿಗೆ ಈಟಿಯಂತೆ ತಿವಿಯುತ್ತಿದ್ದವು.

ಒಂದೂವರೆ ವರ್ಷದಲ್ಲಿ ಕನ್ನಡ ಹಿಂದಿ ಭಾಷೆಗಳ 98 ಚಲನಚಿತ್ರಗಳನ್ನು ಈರ್ವರೂ ಸೇರಿ ನೋಡಿದ್ದೇವೆಂದರೆ ಇಂದಿಗೂ ನನ್ನ ಊಹೆಗೆ ನಿಲುಕುತ್ತಿಲ್ಲ. ನಮ್ಮೀರ್ವರ ಗೆಳೆತನಕ್ಕೀಗ ಬೆಳ್ಳಿ ಹಬ್ಬದ ಸಂಭ್ರಮ. ಆದರೆ ವಿಧಿಯ ಆಟ ಬೆಳ್ಳಿ ಹಬ್ಬದ ಸಂಭ್ರಮ ಸಂಭ್ರಮಿಸಲು ಕವಿಮಿತ್ರ ಹಜರೇಸಾಬ ನದಾಫ ಇಲ್ಲ.

ಇಬ್ಬರ ಬರವಣಿಗೆ, ಸಾಹಿತ್ಯ ಸಂಘಟನೆ, ಪುಸ್ತಕ ಮುದ್ರಣ, ಬಿಡುಗಡೆ, ಸಭೆ ಸಮಾರಂಭ ಪ್ರತಿ ಬರವಣಿಗೆಯ ಸಾಲು-ಸಾಲಿಗೂ ಚರ್ಚೆ ಮಾಡುವ ರೀತಿ ಇಬ್ಬರಿಗೂ ಬೆರಗು ಹುಟ್ಟಿಸುವ ರೀತಿಯಲ್ಲಿತ್ತು. ಈ ನಡುವೆ 2001ರಲ್ಲಿ ನನಗೆ ಅಂತರ್‌ಜಿಲ್ಲಾ ವರ್ಗಾವಣೆಯಾಗಿ ಹಾವೇರಿಯ ಹೊಕ್ಕಳುಬಳ್ಳಿ ಕತ್ತರಿಸಿಕೊಂಡು ಬಂದರೂ ಸ್ನೇಹದ ಬಳ್ಳಿ ಚಿಗುರುತ್ತಲೇ ಇತ್ತು.

2021ರ ಮಾರ್ಚ 27ನೇ ತಾರೀಖು ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ನನ್ನ ‘ಪ್ಯಾರಿಪದ್ಯ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನದಾಫ ಸರ್ ಸಾಕ್ಷಿಯಾಗಿದ್ದರು. ಅಂದು ಅವರ ಕೃತಿಯ ಲೋಕಾರ್ಪಣೆಯೆಂದೇ ಭಾವಿಸಿ, ಸಂಭ್ರಮಪಟ್ಟು, ತಬ್ಬಿಕೊಂಡು ಶುಭಹಾರೈಸಿದ್ದರು. ಅಂದಿನ ದಿನ ಅವರ ಸಹೋದರಿಯ ಮನೆಯಲ್ಲಿನ ವಿಶೇಷ ಕಾರ್ಯಕ್ರಮಕ್ಕೆ ಗೈರುಹಾಜರಿಯಾಗಿದ್ದು ನಮ್ಮೀರ್ವರ ಗಾಢವಾದ ಗೆಳೆತನಕ್ಕೆ ಸಾಕ್ಷಿಯಾಗಿತ್ತು.

2021ರ ಜೂನ್ ತಿಂಗಳಲ್ಲಿ ಕರೋನಾ ಮಹಾಮಾರಿ ಪ್ರೇಮಮಯಿ, ಆದರ್ಶಶಿಕ್ಷಕ, ಉಪನ್ಯಾಸಕ ಹಜರೇಸಾಬರಿಗೆ ವಕ್ಕರಿಸಿಕೊಂಡಿತು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದರೂ ವಾಟ್ಸಪ್ ಮೆಸೇಜ್‌ಗಳ ಆವಕ-ಜಾವಕವಿತ್ತು.

ಆರೋಗ್ಯದ ಬಗ್ಗೆ, ಭವಿಷ್ಯದ ಬಗ್ಗೆ ಸದಾ ನನಗೆ ಎಚ್ಚರಿಸುತ್ತಲೇ ನದಾಫರು ವಿಧಿಯ ಅಟ್ಟಹಾಸದೆದುರು ಕೊನೆಯ ಉಸಿರು ಚೆಲ್ಲಿದರು.

ಸಾಹಿತ್ಯ ಲೋಕ, ಕುಟುಂಬ, ಒಡನಾಡಿಗಳಿಗೆಲ್ಲರಿಗೂ ಅಕ್ಷರಶಃ ತಬ್ಬಲಿತನ ಕಾಡುತ್ತಿದೆ. ಕವಿಗೆ ಸಾವಿದೆ, ಕವಿ ಬರೆದ ಕವಿತೆಗಳಿಗೆ ಸಾವಿಲ್ಲವೆನ್ನುವುದು ನಿತ್ಯಸತ್ಯ. 2018ರಲ್ಲಿ ಅವರ ಸ್ವರಚಿತ ಕವನ ಸಂಕಲನ ‘ಬದುಕು ಛಂದ ಗೀತ’ ಮತ್ತು ‘ನಕ್ಷತ್ರದಾರಿ’ ಸಂಕಲನಗಳು ಮುದ್ರಣಗೊಳ್ಳಬೇಕಾಗಿತ್ತು. ವರ್ಗಾವಣೆ, ಪದೋನ್ನತಿ, ಕೌಟುಂಬಿಕ ಸಮಸ್ಯೆಗಳು ಪುಸ್ತಕ ಬಿಡುಗಡೆಗೆ ತೊಡಕಾಗಿದ್ದವು.

ತಾನೊಂದು ಬಗೆದರೆ ದೈವವೊಂದು ಬಗೆದಿತ್ತು. ಅಕ್ಕರೆಯ ಮಕ್ಕಳಾದ ತಸ್ಮೀನ್, ದಿಯಾ, ಧರ್ಮಪತ್ನಿ ಶ್ರೀಮತಿ ಸಬೀನಾಬಾನು, ತಾಯಿ, ಸಹೋದರ, ಸಹೋದರಿಯರು, ಗೆಳೆಯರು, ವಿದ್ಯಾರ್ಥಿ ಸಮೂಹ ನದಾಫ್‌ರ ಅಗಲಿಕೆಯ ನೋವಿನ ಬಾಧೆಯಿಂದ ಇನ್ನೂ ಹೊರಬಂದಿಲ್ಲ.

ಮುಂದಿನ ದಿನಮಾನಗಳಲ್ಲಿ ಗೆಳೆಯರ, ಕುಟುಂಬದ ಸದಸ್ಯರ ಸಹಕಾರದೊಂದಿಗೆ `ಹಜರೇಸಾಬ ಬಿ. ನದಾಫ ಸಾಹಿತ್ಯ ಪ್ರತಿಷ್ಠಾನ’ ಆರಂಭಿಸುವ ಚಿಂತನೆ ಕೂಡ ಆತ್ಮೀಯ ಗೆಳೆಯರಲ್ಲಿ ಚರ್ಚೆಯಾಗುತ್ತಿದೆ. ಅವರ ಅಪ್ರಕಟಿತ ಬರಹಗಳನ್ನು ಒಂದೆಡೆ ಸೇರಿಸಿ ಪ್ರಕಟಿಸುವ ಇರಾದೆ ಇದೆ.

ಕನ್ನಡ ಸಾಹಿತ್ಯ ಲೋಕ ಅಗಲಿದ ಚೇತನ ಹಜರೇಸಾಬ ಬಿ.ನದಾಫರ ಕಾವ್ಯವನ್ನು ಆಸ್ವಾದಿಸುತ್ತಾರೆಂಬ ಆತ್ಮವಿಶ್ವಾಸದೊಂದಿಗೆ ಅವರ ಆತ್ಮಕ್ಕೆ ಶಾಂತಿಯನ್ನು ಕೋರುವೆ.
                                                                                         – ಎ. ಎಸ್. ಮಕಾನದಾರ
                                                                                         ನಿರಂತರ ಪ್ರಕಾಶನ, ಗದಗ

ಗೆಳೆಯ ನದಾಫರು ನಮ್ಮನ್ನಗಲಿದ ಎರಡು ವರ್ಷಗಳ ತರುವಾಯ ಅವರ ಕವಿತೆಗಳನ್ನು ಒಟ್ಟುಗೂಡಿಸಿ ಪ್ರಕಟಿಸಬೇಕೆಂಬ ಮಹದಾಸೆ ಚಿಗುರಿದೆ. ಅಂತೆಯೇ ತಸ್ಮೀನ್ ಪ್ರಕಾಶನದ ಅಡಿಯಲ್ಲಿ ‘ಬದುಕು ಛಂದ ಗೀತ’ ಮತ್ತು ‘ನಕ್ಷತ್ರ ದಾರಿ’ ಸಂಕಲನಗಳು ಪ್ರಕಟಣೆ ಮಾಡುವ ಪ್ರಯತ್ನಕ್ಕೆ ಶ್ರೀಮತಿ ಸಬೀನಾ ಅವರ ಸಹಕಾರ, ನದಾಫರವರ ಕುಟುಂಬದವರ ಒತ್ತಾಸೆ ಕೂಡ ಕಾರಣ.

ಪುಂಡಲೀಕ ಕಲ್ಲಿಗನೂರ ನದಾಫ್‌ರ ಓದಿನ ಹಸಿವು ತಣಿಸಿದರು. ಉನ್ನತ ಹುದ್ದೆಗೆ ಅನಿವಾರ್ಯವಾಗಿ ಕಠಿಣ ಶ್ರಮ ಹಾಕಲು ಒತ್ತಾಯ ಮಾಡಿದರು. ನಾನು ಸನ್ 1999ರಲ್ಲಿ ಸವಣೂರ ಕೋರ್ಟನಲ್ಲಿ ಕೆಲಸಕ್ಕೆಂದು ಸೇರಿದೆ. ಹಿರಿಯ ಸಹೋದರ, ಚಿತ್ರಕಲಾವಿದ ಪುಂಡಲೀಕ ಕಲ್ಲಿಗನೂರ, ಉಪನ್ಯಾಸಕ ಎಂ.ಡಿ. ವಕ್ಕುಂದ, ವಿಮರ್ಶಕಿ ಡಾ. ವಿನಯಾ ನಾಯಕ, ಪತ್ರಕರ್ತ ಎಂ. ಮಂಜುನಾಥ ಬಮ್ಮನಕಟ್ಟಿ ಮುಂತಾದ ನನ್ನ ಚಿರಪರಿಚಿತ ವಲಯವೂ ಗೆಳೆಯ ಹಜರೇಸಾಬರನ್ನು ಸ್ನೇಹದ ಸಂಕೋಲೆಯಲ್ಲಿ ಬಂಧಿಸಿತ್ತು.


Spread the love

LEAVE A REPLY

Please enter your comment!
Please enter your name here