ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನಲ್ಲಿ ಕಳೆದ 10-12 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆದು ನಿಂತಿದ್ದ ಫಸಲು ಸಂಪೂರ್ಣ ಹಾಳಾಗಿವೆ. ಹೀಗಾಗಿ, ರೈತರು ತುಂಬಿರುವ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಕೃಷಿಕ ಸಮಾಜ ಮತ್ತು ಭಾರತೀಯ ಕಿಸಾನ್ ಸಂಘದಿಂದ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ಮುಂಗಾರು ಪ್ರಮುಖ ಬೆಳೆಯಾಗಿರುವ ಗೋವಿನಜೋಳ, ಹತ್ತಿ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಅನೇಕ ಬೆಳೆಗಳು ಕಟಾವಿನ ಹಂತಕ್ಕೆ ಬಂದಿತ್ತು. ಆದರೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಅವುಗಳ ಮೇಲೆ ಬೆಳೆ ವಿಮೆ ಕಟ್ಟಿದ್ದೇವೆ. ಬೆಳೆ ವಿಮೆ ಕಂಪನಿಯಿಂದ ಪರಿಹಾರವನ್ನು ಬೇಗನೆ ದೊರಕಿಸಿಕೊಡಬೇಕು ಹಾಗೂ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಗೋಧಿ ಈಗಾಗಲೇ ಬಿತ್ತನೆ ಮಾಡಿದ್ದು, ಅದು ಸಹ ಭೂಮಿಯಲ್ಲಿಯೇ ಕೊಳೆತು ಹೋಗಿದೆ. ಕೂಡಲೇ ಸಂಬಂಧಪಟ್ಟವರು ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನಮಂತಪ್ಪ ಚಿಂಚಲಿ, ಟಾಕಪ್ಪ ಸಾತಪುತೆ, ಲಕ್ಷ್ಮಣ ಲಮಾಣಿ, ನಮರೆಡ್ಡಿ ಹೊಂಬಳ, ಶಿವಪುತ್ರಪ್ಪ ತಾರಿಕೊಪ್ಪ, ಸಂತೋಷ ಹೊಂಬಳ, ಶ್ರೀನಿವಾಸ ಯರಗುಪ್ಪಿ, ವೆಂಕನಗೌಡ ಪಾಟೀಲ, ವೀರಪ್ಪ ನಾಯ್ಕರ, ಲಕ್ಷ್ಮಣ ಚಿಂಚಲಿ, ಮಂಜುನಾಥ ಕೋಟಗಿ, ಅಶೋಕ ಕುರಿ, ಫಕ್ಕಿರೇಶ ಜಂತ್ಲಿ, ಚನ್ನಬಸಪ್ಪ ಲಗಳಿ ಮುಂತಾದವರು ಇದ್ದರು.