ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯ ಮತ್ತು ಇಂಧನ ಉಳಿತಾಯ ಕರೆ ಬೆನ್ನಲ್ಲೇ ದೆಹಲಿ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ನಿಯಮಾವಳಿ ಜಾರಿಗೆ ತಂದಿದೆ. ಈ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಘೋಷಣೆಯಾಗಿವೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ‘ಮೇರಾ ಭಾರತ್ ಮೇರಾ ಯೋಗಧಾನ್’ ಅಭಿಯಾನದಡಿ ನಾಳೆಯಿಂದ (ಮೇ 15) ಹೊಸ ಕ್ರಮಗಳನ್ನು ಜಾರಿಗೆ ತರುವಂತೆ ಆದೇಶಿಸಿದ್ದಾರೆ. ಇದರಡಿ ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿಗೆ ಬರಲಿದೆ.
ಇದಲ್ಲದೆ, ವಾರದಲ್ಲಿ ಒಂದು ದಿನ ಮೆಟ್ರೋ ರೈಲಿನಲ್ಲಿ ಸಂಚಾರ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಭೆಗಳ ಶೇಕಡಾ 50ರಷ್ಟು ಆನ್ಲೈನ್ ಮೂಲಕ ನಡೆಸಲು ಸೂಚಿಸಲಾಗಿದೆ.
ಇಂಧನ ಉಳಿತಾಯದ ಭಾಗವಾಗಿ ಮುಂದಿನ ಆರು ತಿಂಗಳವರೆಗೆ ಹೊಸ ವಾಹನಗಳ ಖರೀದಿಗೆ ನಿರ್ಬಂಧ ವಿಧಿಸಲಾಗಿದ್ದು, ಅಧಿಕಾರಿಗಳ ಇಂಧನ ಬಳಕೆಯಲ್ಲಿ ಶೇಕಡಾ 20ರಷ್ಟು ಕಡಿತಕ್ಕೆ ಆದೇಶಿಸಲಾಗಿದೆ. ಜೊತೆಗೆ ಅಧಿಕಾರಿಗಳ ವಿದೇಶಿ ಪ್ರವಾಸಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಸರ್ಕಾರಿ ನೌಕರರಿಗಾಗಿ 58 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸೋಮವಾರ ‘ಮಂಡೇ ಮೆಟ್ರೋ’ ಅಭಿಯಾನದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇದರೊಂದಿಗೆ ವಾರಕ್ಕೆ ಒಂದು ದಿನ ವಾಹನ ರಹಿತ ದಿನ ಆಚರಿಸಲು ಸಾರ್ವಜನಿಕರಿಗೂ ಮನವಿ ಮಾಡಲಾಗಿದೆ. ಈ ಕ್ರಮಗಳು ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆಗೆ ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿದೆ.



