ತುಮಕೂರು: ರಸ್ತೆ ಗುಂಡಿಗಳ ಸಮಸ್ಯೆಯಿಂದ ವಾಹನ ಸವಾರರು, ಪಾದಚಾರಿಗಳು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿರುವುದು ಸಾಮಾನ್ಯ. ಆದರೆ, ತುಮಕೂರಿನಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಮಸ್ಯೆ ಪರಿಹರಿಸುವಂತೆ ನೇರವಾಗಿ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.
ಶಾಲೆಗೆ ಸೈಕಲ್ನಲ್ಲಿ ತೆರಳುವಾಗ ರಸ್ತೆ ಗುಂಡಿಗಳಿಂದ ಹಲವು ಬಾರಿ ಬಿದ್ದು ಗಾಯಗೊಂಡಿರುವ ಬಾಲಕಿ, ತನ್ನ ಸಮಸ್ಯೆಯ ಜೊತೆಗೆ ಸಾರ್ವಜನಿಕರ ಸಂಕಷ್ಟವನ್ನೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ.
ಸ್ಮಾರ್ಟ್ ಸಿಟಿ ರಸ್ತೆಯಲ್ಲೇ ಗುಂಡಿಗಳ ಸಮಸ್ಯೆ!
ತುಮಕೂರು ನಗರದ ಟೌನ್ಹಾಲ್ ಬಳಿಯ ಎಂಪ್ರೆಸ್ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಡಿಂಪಲ್ ಧೃತಿ ಈ ಪತ್ರ ಬರೆದಿರುವ ಬಾಲಕಿ. ಚಿಕ್ಕಪೇಟೆಯಿಂದ ಪ್ರತಿದಿನ ಸೈಕಲ್ನಲ್ಲಿ ಶಾಲೆಗೆ ತೆರಳುವ ಈಕೆಗೆ ಮಂಡಿಪೇಟೆ ರಸ್ತೆಯ ಗುಂಡಿಗಳೇ ದೊಡ್ಡ ಸಮಸ್ಯೆಯಾಗಿವೆ. ರಸ್ತೆಯಲ್ಲಿರುವ ಹೊಂಡ-ಗುಂಡಿಗಳಿಂದ ಸೈಕಲ್ನಲ್ಲಿ ಸಂಚರಿಸುವಾಗ ಹಲವು ಬಾರಿ ಬಿದ್ದು ಗಾಯಗೊಂಡಿದ್ದಾಳೆ. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಮನವಿ ಮಾಡಿದ್ದಾಳೆ.
ಮಂಡಿಪೇಟೆ ರಸ್ತೆಯಲ್ಲಿ ವಾಹನ ಸವಾರರಿಗೆ ಸಂಕಷ್ಟ:
ತುಮಕೂರಿನ ಮಂಡಿಪೇಟೆ ರಸ್ತೆಯ ಕವಿತಾ ಮೆಟಲ್ ಸ್ಟೋರ್ನಿಂದ ವೀರಭದ್ರಸ್ವಾಮಿ ದೇವಸ್ಥಾನದವರೆಗಿನ ರಸ್ತೆಯ ಸ್ಥಿತಿ ತೀರಾ ಹದಗೆಟ್ಟಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಯಲ್ಲಿಯೇ ಮತ್ತೆ ಮತ್ತೆ ಗುಂಡಿಗಳನ್ನು ತೋಡಿ ಹಾಳು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆ ದುರಸ್ತಿಯಾಗದ ಕಾರಣ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ರಸ್ತೆಯುದ್ದಕ್ಕೂ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ತೀವ್ರಗೊಂಡಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪಾದಚಾರಿಗಳು ರಸ್ತೆಯಲ್ಲಿ ಓಡಾಡುವುದಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಶಾಲಾ ಮಕ್ಕಳು ಅಪಾಯದ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪುಟ್ಟ ವಿದ್ಯಾರ್ಥಿನಿಯ ಪತ್ರಕ್ಕಾದರೂ ಅಧಿಕಾರಿಗಳು ಸ್ಪಂದಿಸುತ್ತಾರಾ?
ಸಾರ್ವಜನಿಕರು ಹಲವು ಬಾರಿ ಸಮಸ್ಯೆ ಕುರಿತು ದೂರು ನೀಡಿದರೂ ಪರಿಹಾರ ಸಿಗುತ್ತಿಲ್ಲ ಎಂಬುದು ಸ್ಥಳೀಯರ ಅಸಮಾಧಾನ. ಇದೀಗ 8ನೇ ತರಗತಿಯ ವಿದ್ಯಾರ್ಥಿನಿ ಡಿಂಪಲ್ ಧೃತಿ ಪತ್ರದ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾಳೆ. ಶಾಲೆಗೆ ಹೋಗುವಾಗ ತಾನು ಅನುಭವಿಸಿದ ತೊಂದರೆಯ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ನೂರಾರು ಜನರ ಸಮಸ್ಯೆಯನ್ನೂ ಪ್ರಸ್ತಾಪಿಸಿದ್ದಾಳೆ.
ಪುಟ್ಟ ವಿದ್ಯಾರ್ಥಿನಿಯ ಈ ಪ್ರಯತ್ನವಾದರೂ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸುತ್ತಾ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಂಡಿಪೇಟೆ ರಸ್ತೆಯ ಗುಂಡಿಗಳನ್ನು ಮುಚ್ಚಿ, ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.









