ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನರೇಗಲ್ಲ ಹೋಬಳಿಯಲ್ಲಿ ಹಿಂಗಾರು ಬಿತ್ತನೆ ಜೋರಾಗಿ ನಡೆದಿದೆ. ಇದಕ್ಕೆ ಕಾರಣ ಈ ಹೋಬಳಿಯಲ್ಲಿ ಉತ್ತಮ ಮಳೆಯಾಗುತ್ತಿರುವುದು. ಈ ಹಿಂಗಾರಿನಲ್ಲಿ ರೈತರು ಮುಖ್ಯವಾಗಿ ಕಡಲೆ, ಜೋಳ, ಗೋಧಿ ಮತ್ತು ಕುಸುಬಿಗಳನ್ನು ಬೆಳೆಯುತ್ತಿದ್ದಾರೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ಗದಗಿನ ಮಾಹಿತಿ ನೀಡಿದ್ದಾರೆ.
ನರೇಗಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸರಬರಾಜು ಮಾಡಲು ಒಟ್ಟು 4475 ಕ್ವಿಂಟಲ್ ಕಡಲೆ ಬೀಜ ಬಂದಿತ್ತು. ಅದರಲ್ಲಿ ಈಗಾಗಲೇ 3376 ಕ್ವಿಂಟಲ್ ಮಾರಾಟವಾಗಿದೆ. ಜೋಳ 80.40 ಕ್ವಿಂಟಲ್ ಸರಬರಾಜಾಗಿದ್ದು, ಅದರಲ್ಲಿ 16.83 ಕ್ವಿಂಟಲ್ ಮಾರಾಟವಾಗಿದೆ. ಗೋಧಿ 40 ಕ್ವಿಂಟಲ್ ಬಂದಿದ್ದು, 5 ಕ್ವಿಂಟಲ್ ಮಾರಾಟವಾಗಿದೆ. ಕುಸುಬಿ 3 ಕ್ವಿಂಟಲ್ ಸರಬರಾಜು ಆಗಿದ್ದು ಎಲ್ಲವೂ ಮಾರಾಟವಾಗಿದೆ ಎಂದು ತಿಳಿಸಿದರು.
ಈಗ ಕೇಂದ್ರದಲ್ಲಿ 1099 ಕ್ವಿಂಟಲ್ ಕಡಲೆ ಬೀಜ, 63.57 ಕ್ವಿಂಟಲ್ ಜೋಳ, 35 ಕ್ವಿಂಟಲ್ ಗೋಧಿ ದಾಸ್ತಾನು ಇದೆ. ಹಿಂಗಾರು ಬಿತ್ತನೆ ಇನ್ನೂ ಮುಕ್ತಾಯ ಕಂಡಿಲ್ಲವಾದ್ದರಿಂದ ಇನ್ನೂ ಅನೇಕ ರೈತರು ಬರುವ ನಿರೀಕ್ಷೆಯಿದ್ದು, ಬಹುತೇಕ ಎಲ್ಲ ಬೀಜಗಳೂ ಮಾರಾಟವಾಗುವ ಭರವಸೆ ಇದೆ ಎಂದು ಬಸವರಾಜ ಹೇಳಿದರು.
ನರೇಗಲ್ಲ ದೊಡ್ಡ ಹೋಬಳಿಯಾಗಿದ್ದು, ಬಿತ್ತನೆ ಬೀಜಗಳನ್ನು ಇಲ್ಲಿ ಮಾತ್ರವಲ್ಲದೆ ಇನ್ನೂ ಹತ್ತು ಕಡೆಗಳಲ್ಲಿ ಮಾರಾಟ ಮಾಡಲು ಅನುಕೂಲ ಮಾಡಲಾಗಿದೆ. ಇದರಿಂದ ರೈತರಿಗೆ ವ್ಯರ್ಥ ಓಡಾಟ, ಸಾರಿಗೆ ಮತ್ತು ಸಮಯದ ಉಳಿತಾಯವಾಗಲೆಂದು ಅಬ್ಬಿಗೇರಿ, ನಿಡಗುಂದಿ, ಹಾಲಕೆರೆ, ಮಾರನಸಬರಿ, ಜಕ್ಕಲಿ, ಇಟಗಿ, ಡ.ಸ.ಹಡಗಲಿ, ಕುರಡಗಿ, ಸೂಡಿ ಗ್ರಾಮಗಳ ಎಲ್ಲ ಸೊಸೈಟಿಗಳಲ್ಲಿ ಮತ್ತು ನರೇಗಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿತ್ತನೆ ಬೀಜ ಯಾರಿಗಾದರೂ ಕಡಿಮೆ ಬಿದ್ದರೆ ಇಲ್ಲಿಂದಲೇ ಸರಬರಾಜು ಮಾಡಲಾಗುವದೆಂದು ತಿಳಿಸಿದರು.