ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ರೈತರ ಮನವಿ

0
Appeal of farmers demanding compensation
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಮಂಗಳವಾರ ಶಿರಹಟ್ಟಿ ತಾಲೂಕಿನ ಮಾಗಡಿ, ಕೊಂಚಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮೊಳಕೆಯೊಡೆದ ಮೆಕ್ಕೆ ಜೋಳದ ತೆನೆಗಳನ್ನು ಹಿಡಿದು ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ ಅನಿಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ ಸಂಘದ ಅಧ್ಯಕ್ಷ ಸಂಜೀವ ಹುಡೇದ್, ರೈತ ಮುಖಂಡ ಚನ್ನಪ್ಪ ಷಣ್ಮುಖಿ ಮಾತನಾಡಿ, ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಸತತ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತಿದ ಎಲ್ಲ ಬೆಳೆಗಳು ಹಾನಿಯಾಗಿದ್ದು, ಹೊಲಕ್ಕೆ ಹಾಕಿದ ಬಂಡವಾಳ ಮರಳಿ ಬಾರದಂತಾಗಿದೆ. ದುಬಾರಿ ಬೀಜ, ಗೊಬ್ಬರ ಹಾಕಿ ಬೆಳೆದ ಎಲ್ಲ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು, ಸರ್ಕಾರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ತಾಲೂಕಿನಲ್ಲಿ ರೈತರು ವರ್ಷವಿಡೀ ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆ ಕಾಡು ಪ್ರಾಣಿ, ಪಕ್ಷಿಗಳ ಪಾಲಾಗುತ್ತಿರುವುದು ಒಂದೆಡೆಯಾದರೆ, ಪೈರು ಬರುವಷ್ಟರಲ್ಲಿ ವಿಪರೀತ ಮಳೆ ಸುರಿದು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ.

ಕಟಾವಿಗೆ ಬಂದ ಬೆಳೆ ಮಳೆ ನೀರಿನಲ್ಲಿ ಜಲಾವೃತಗೊಂಡು ಕೊಳೆಯುತ್ತಿದೆ. ತಕ್ಷಣ ಅಧಿಕಾರಿಗಳು ಎಚ್ಚೆತ್ತು ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು. ಅತಿವೃಷ್ಟಿ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅನಿಲ್ ಬಡಿಗೇರ, ರೈತರ ಹಿತ ಕಾಪಾಡಲು ತಾಲೂಕಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ತಂಡ ಜಂಟಿಯಾಗಿ ಸಮೀಕ್ಷೆ ಕಾರ್ಯ ನಡೆಸಿದ್ದು, ಎರಡು ಮೂರು ದಿನದಲ್ಲಿ ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.

ಶಿವಪ್ಪ ಸರವಿ, ಶಿವಾನಂದ ಲಿಂಗಶೆಟ್ರ, ಸಂಗಪ್ಪ ನಂದಗಾವಿ, ಖಾನಸಾಬ ಸೂರಣಗಿ, ಚಂದ್ರಶೇಖರ ಬೂದಿಹಾಳ, ಚನ್ನಬಸಪ್ಪ ಹಾವೇರಿ, ಶಿವಾನಂದಪ್ಪ ಹೊಸಮನಿ, ಅಶೋಕ ಸೊರಟೂರ, ದೇವಪ್ಪ ಬಟ್ಟೂರ, ಶಿವರೆಡ್ಡಿ ಗುತ್ತಲ, ಮರಿಯಪ್ಪ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here