ವಿಜಯಸಾಕ್ಷಿ ಸುದ್ದಿ, ಗದಗ : 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕಾ ಅಭಿಯಾನವು ಜಿಲ್ಲಾದ್ಯಂತ ಅಕ್ಟೋಬರ್ 21ರಿಂದ ನವೆಂಬರ್ 20ರವರೆಗೆ ಜರುಗುತ್ತಿದ್ದು, ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲುಬಾಯಿ ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ಕಾಲುಬಾಯಿ ಲಸಿಕಾಕರಣ ಮುಖ್ಯವಾಗಿದ್ದು, ಜಾನುವಾರುಗಳಿಗೆ ತಪಾಸಣೆ ನಡೆಸಿ ತಪ್ಪದೇ ಲಸಿಕೆ ಹಾಕಬೇಕು. ಈ ಕುರಿತು ಜಾನುವಾರು ಮಾಲೀಕರಿಗೆ ಲಸಿಕಾಕರಣದ ಕುರಿತು ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಕಾಲುಬಾಯಿ ಲಸಿಕೆಯನ್ನು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ನೀಡಲಾಗುತ್ತಿದೆ. ಲಸಿಕಾಕರಣದಿಂದ ಯಾವುದೇ ಜಾನುವಾರು ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದರಲ್ಲದೆ, 6ನೇ ಸುತ್ತಿನ ಕಾಲುಬಾಯಿ ಲಸಿಕೆ ಹಾಕಬೇಕಾದ ಜಾನುವಾರುಗಳ ಕುರಿತು ತಾಲೂಕಾವಾರು ಮಾಹಿತಿ ಪಡೆದು ಚರ್ಚಿಸಿದರು. ಜಿಲ್ಲೆಯ ಜಾನುವರುಗಳ ಲಸಿಕಾಕರಣಕ್ಕೆ ಅಗತ್ಯವಿರುವ ಔಷಧಿ ವ್ಯವಸ್ಥೆ ಮತ್ತು ಶಿತಲೀಕರಣ ವ್ಯವಸ್ಥೆ ಕುರಿತು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ದನ ಮತ್ತು ಎಮ್ಮೆ ಸೇರಿದಂತೆ ಒಟ್ಟಾರೆ 192109 ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಿಳಿಸಿ, ಸಭೆಗೆ ವಿವರ ನೀಡಿದರು.
ಲಸಿಕೆಯನ್ನು ಸಂಗ್ರಹಿಸಿಡಲು ಶಿತಲೀಕರಣದ ವ್ಯವಸ್ಥೆ ಮಾಡಲಾಗಿದ್ದು, 3 ವಾಕ್ ಇನ್ ಕೂಲರ್, 16 ಐಸ್‌ಲೈನ್ ರೆಫ್ರಿಜರೇಟರ್, 19 ಐಸ್‌ಲೈನ್ ರೆಫ್ರಿಜರೇಟರ್ ಫ್ರೀಜರ್, 7 ಆಕ್ಟಿವ್ ಕೂಲರ್ ಬಾಕ್ಸ್, 86 ರೆಫ್ರಿಜರೇಟರ್, 173 ವ್ಯಾಕ್ಸಿನ್ ಕ್ಯಾರಿಯರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 150 ಲಸಿಕಾದಾರರು ಲಸಿಕೆ ಹಾಕಲಿದ್ದು, 11 ಲಸಿಕಾ ತಂಡದ ಮುಖ್ಯಸ್ಥರಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯ 7 ತಾಲೂಕುಗಳಲ್ಲಿ 2598 ಬ್ಲಾಕ್‌ಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ಮಾಹಿತಿ ಕುರಿತು ಪೋಸ್ಟರ್ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ತಾಲೂಕಾ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಒಟ್ಟಾರೆ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಸರಿಯಾದ ಯೋಜನೆ ರೂಪಿಸಬೇಕು. ರೂಪಿಸಿದ ಯೋಜನೆಯಂತೆ ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಿ ಪೂರ್ಣಗೊಳಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ಇರುವಂತೆ ಇಲಾಖಾಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ತಿಳಿಸಿದರು.


