ನವದೆಹಲಿ: ಕೊಲ್ಲಿ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರವನ್ನು 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರವನ್ನು 115 ರೂ. ಹೆಚ್ಚಿಸಲಾಗಿದೆ.
ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿದ್ದು, ಈ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ದರ ಏರಿಕೆಗೆ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 855.50 ರೂ. ಇದ್ದು, ಇದೀಗ ಅದು 915.50 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 913 ರೂ., ಮುಂಬೈನಲ್ಲಿ 912.50 ರೂ. ಹಾಗೂ ಚೆನ್ನೈನಲ್ಲಿ 928.50 ರೂ.ಗೆ ಗೃಹ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ.
ಏಪ್ರಿಲ್ 2025ರಿಂದ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ನಡೆದಿರಲಿಲ್ಲ. ಈ ನಡುವೆ ಜನವರಿಯಿಂದ ಅಮೆರಿಕದಿಂದ ಭಾರತಕ್ಕೆ ಎಲ್ಪಿಜಿ ಆಮದು ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
2025ರ ನವೆಂಬರ್ನಲ್ಲಿ ಭಾರತೀಯ ಪಿಎಸ್ಯು ತೈಲ ಕಂಪನಿಗಳು 2026ರ ಒಪ್ಪಂದ ವರ್ಷಕ್ಕಾಗಿ ಅಮೆರಿಕದ ಗಲ್ಫ್ ಕರಾವಳಿಯಿಂದ ಸುಮಾರು 2.2 MTPA ಎಲ್ಪಿಜಿ ಆಮದು ಮಾಡಲು ಒಂದು ವರ್ಷದ ಒಪ್ಪಂದಕ್ಕೂ ಸಹಿ ಹಾಕಿವೆ ಎಂದು ತಿಳಿದುಬಂದಿದೆ.



