ಹಾಸನ:- ಹಾಸನದ ತಣ್ಣೀರಹಳ್ಳದಲ್ಲಿ ಅಪಘಾತ ಸಂಭವಿಸಿ ಇಬ್ಬರು ದುರ್ಮರಣ ಹೊಂದಿದ್ದಾರೆ.
ಹಾಸನಾಂಬೆಯ ದರ್ಶನ ಮುಗಿಸಿ ನಡೆದುಕೊಂಡು ತೆರಳುತ್ತಿದ್ದ ಭಕ್ತರಿಗೆ ಕಾರು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.
ತಂದೆ 38 ವರ್ಷದ ಕುಮಾರ, 12 ವರ್ಷದ ಮಗಳು ಕಾವ್ಯ, ಮೃತ ದುರ್ದೈವಿಗಳು. ಕುಮಾರ ಅವರ ಪತ್ನಿ ಪುಟ್ಟಮ್ಮ ಸ್ಥಿತಿ ಗಂಭೀರವಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಎನ್ಎಚ್ಪುರ ಗ್ರಾಮದ ಕುಮಾರ, ಗುರುವಾರ ರಾತ್ರಿ ಪತ್ನಿ ಪುಟ್ಟಮ್ಮ, ಮಗಳು ಕಾವ್ಯ ಜೊತೆ ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದರು.
ಹಾಸನಾಂಬೆ ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿಹೊಡೆದಿದೆ. ಸ್ಥಳದಲ್ಲೇ ಕುಮಾರ ಹಾಗೂ ಕಾವ್ಯ ಮೃತಪಟ್ಟಿದ್ದಾರೆ. ಗಾಯಾಳು ಪುಟ್ಟಮ್ಮನ ಸ್ಥಿತಿ ಗಂಭೀರವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



