ಬೆಂಗಳೂರು:– ಬೆನ್ಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಂಧ್ಯಾ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ನಗರದ ಕೆಂಗೇರಿ ಬಸ್ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಶನಿವಾರ ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು.
ಈ ವೇಳೆ ಮದ್ಯದ ಮತ್ತಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಯುವಕ, ಸಂಧ್ಯಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿದೆ. ಅಪಘಾತದ ರಭಸಕ್ಕೆ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ, ಸ್ಥಳೀಯರು ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿ, ಕೆಂಗೇರಿ ಬಸ್ ನಿಲ್ದಾಣದ ಮುಂದೆ ಬೆಂಜ್ ಕಾರು ಡಿಕ್ಕಿಯಾಗಿ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಡ್ರಂಕ್ & ಡ್ರೈವ್ ಮತ್ತು ರಕ್ತ ಪರೀಕ್ಷೆ ಮಾಡಿಸಲಾಗಿದೆ. ‘ಉದ್ದೇಶಪೂರ್ವಕವಲ್ಲದ ಕೊಲೆ’ ಎಂದು ಕೇಸ್ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.