ವಿಜಯಸಾಕ್ಷಿ ಸುದ್ದಿ, ಮೈಸೂರು: ಜಗತ್ತಿಗೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ್ದು ನಮ್ಮ ಹೆಮ್ಮೆಯ ಭಾರತ ಎಂದು ಹೇಳಲು ಅತ್ಯಂತ ಸಂತಸ ಎನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದು. ದೇಶದ ಕಟ್ಟ ಕಡೆಯ ಪ್ರಜೆಗಳಿಗೆ ಪ್ರತಿಯೊಂದು ಸೌಲಭ್ಯಗಳನ್ನು ನಾಗರಿಕ ಹಕ್ಕುಗಳನ್ನು ತಲುಪಿಸುವ ದೊಡ್ಡ ಹೊಣೆಗಾರಿಕೆ ಪ್ರಜಾಪ್ರತಿನಿಧಿಗಳಿಗೆ ಇರುತ್ತದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಡಿ ಪ್ರಜಾಪ್ರತಿನಿಧಿಗಳು ಕೆಲಸ ಮಾಡಿದರೆ ದೇಶ ಅತ್ಯಂತ ಸಂಪದ್ಭರಿತವಾಗುವುದರಲ್ಲಿ ಸಂಶಯ ಇಲ್ಲ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.
ಮೈಸೂರಿನ ಜೆ.ಎಸ್.ಎಸ್ ಮಹಾ ವಿದ್ಯಾಪೀಠದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯ, ರಾಜ್ಯ ಪತ್ರಗಾರ ಇಲಾಖೆ ಹಾಗೂ ಮೈಸೂರು ವಿಭಾಗೀಯ ಪತ್ರಗಾರ ಇಲಾಖೆ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಪ್ರಜಾಪ್ರತಿನಿಧಿ ಸಭೆ ಹಾಗೂ ಚಾರಿತ್ರಿಕ ಅವಲೋಕನ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ದೊಡ್ಡ ಹೊಣೆಗಾರಿಕೆ ಸಿಕ್ಕಾಗ ಪ್ರಜಾಪ್ರತಿನಿಧಿಗಳು ತಮ್ಮ ಚಾರಿತ್ರಿಕ ನಡೆಯನ್ನು ಕೂಡ ಕಾಪಾಡಿಕೊಂಡು ಕೆಲಸ ಮಾಡಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರಗಳನ್ನು ಸಮಾಜ ನೋಡುತ್ತಿರುತ್ತದೆ. ಸುಂದರ, ಶಾಂತಿಯುತ, ಸಮೃದ್ಧ ಸಮಾಜ ಕಟ್ಟುವಲ್ಲಿ ಪ್ರಜಾಪ್ರತಿನಿಧಿಗಳಿಗೆ ಚಾರಿತ್ರಿಕ ನಡೆ ಅತ್ಯಂತ ಮಹತ್ವದ್ದು. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕ ಬದುಕಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಪರಿಪಾಠವನ್ನ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ವಿಭಾಗೀಯ ಪತ್ರಗಾರ ಇಲಾಖೆ ಹಿರಿಯ ಅಧಿಕಾರಿಗಳು, ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.