ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವಕ್ಕೆ ಮಹಾರಾಷ್ಟ್ರ ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ದೇವಸ್ಥಾನದ ಪ್ರಾಂಗಣದಲ್ಲಿ ಪಟಾಕಿ ಸಿಡಿಸುತ್ತಿದ್ದಂತೆಯೇ ಭಕ್ತರು ಏಕ ಕಾಲಕ್ಕೆ ಮೊದಲೇ ಸಿದ್ಧಪಡಿಸಿದ್ದ ಲಕ್ಷದೀಪ ಸ್ತಂಭಕ್ಕೆ ದೀಪ ಬೆಳಗಿಸಿದರು. ಈ ವೇಳೆ ದೇಗುಲ, ದೇಗುಲದ ಪ್ರಾಂಗಣ, ಸುತ್ತಲಿನ ಬೀದಿಗಳು, ರಥಬೀದಿಗಳಲ್ಲಿ ದೀಪ ಪ್ರಜ್ವಲನೆಯಿಂದ ಹೊಂಬೆಳಕು ಮೂಡಿತ್ತು.
ಲಕ್ಷದೀಪೋತ್ಸವ ಸೇವಾಕಾರ್ಯದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಕ ಬಳಗ, ವಿದ್ಯಾರ್ಥಿಗಳು, ಅಗಡಿ ಇಂಜಿನಿಯರಿಂಗ್, ಬಿಸಿಎನ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು, ಬೀಗರು, ಬಿಜ್ಜರು ಹೊಸ ಬಟ್ಟೆ ಧರಿಸಿ ದೀಪಸ್ತಂಭಕ್ಕೆ ಶೃದ್ಧಾ-ಭಕ್ತಿಯಿಂದ ಎಣ್ಣೆ ಹಾಕಿ ದೀಪ ಬೆಳಗಿದರು. ಸಂಜೆ 7 ಗಂಟೆಯಿಂದ ಇಡೀ ರಾತ್ರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು ದೀಪದ ಬೆಳಕಿನಲ್ಲಿ ಪ್ರಜ್ವಲಿಸಿದವು.