ಗುಲಾಬಿ ರಂಗಿನ ತುಟಿಗಳು ಚಳಿಗಾಲ ಬಂತೆಂದರೆ ಸಾಕು ಹೆದರಿ ಬಾಡಿ ಹೋಗುತ್ತವೆ. ಕೊರೆಯುವ ಚಳಿ ಮತ್ತು ಒಣ ಗಾಳಿ ನಮ್ಮ ಸೂಕ್ಷ್ಮ ತುಟಿಯ ಮೇಲೆ ಹಾನಿಯನ್ನುಂಟು ಮಾಡುತ್ತದೆ. ತುಟಿಗಳು ಒಣಗಿ, ಬಿರುಕು ಬಿಡುತ್ತದೆ ಮತ್ತು ಸಿಪ್ಪೆ ಏಳುತ್ತದೆ, ಇದು ತೀವ್ರ ನೋವನ್ನುಂಟುಮಾಡುತ್ತದೆ ಮಾತ್ರವಲ್ಲ ನಮ್ಮ ಮುಖದ ಅಂದವನ್ನು ಹಾಳುಮಾಡುತ್ತದೆ.
ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚು ಗಮನ ಕೊಡಬೇಕು. ಎಷ್ಟೇ ಕಾಳಜಿ ವಹಿಸಿದರೂ ತುಟಿ, ಕೈಕಾಲುಗಳ ಚರ್ಮವು ಬಿರುಕು ಬಿಡುತ್ತದೆ. ಅದರಲ್ಲೂ ತುಟಿಯೂ ಒಡೆಯುವುದರಿಂದ ನೋವಿನಿಂದ ಕೂಡಿರುತ್ತದೆ.
ಅದಲ್ಲದೇ, ಈ ಬಿರುಕು ತುಟಿಯ ಅಂದವನ್ನು ಹಾಳು ಮಾಡುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುವ ಬದಲು ಅಡುಗೆ ಮನೆಯಲ್ಲಿ ಸಿಗುವ ಈ ಸಾಮಗ್ರಿಗಳಿಂದ ತುಟಿಯ ಅಂದವನ್ನು ಹೆಚ್ಚಿಸಬಹುದು.
* ಜೇನುತುಪ್ಪ : ಅಡುಗೆ ಮನೆಯಲ್ಲಿರುವ ಜೇನುತುಪ್ಪವನ್ನು ಒಡೆದಿರುವ ತುಟಿಗಳಿಗೆ ಲೇಪಿಸಬೇಕು. ಈ ರೀತಿ ಮಾಡುವುದರಿಂದ ಒಡೆದ ತುಟಿಗಳ ನೋವು ಕೂಡ ಕಡಿಮೆಯಾಗುತ್ತದೆ. ತುಟಿಗಳು ಮೃದುವಾಗುವುದಲ್ಲದೇ ಅಂದವು ಹೆಚ್ಚಾಗುತ್ತದೆ.
* ಬಾದಾಮಿ ಎಣ್ಣೆ: ಚಳಿಗಾಲದಲ್ಲಿ ತುಟಿಗಳು ಒಡೆಯುತ್ತಿದ್ದರೆ, ಪ್ರತಿದಿನ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಬಾದಾಮಿ ಎಣ್ಣೆಯಿಂದ ತುಟಿಗಳನ್ನು ಐದು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡುವುದರಿಂದ ತುಟಿಗಳು ಮೃದುವಾಗುತ್ತದೆ.
* ಅಲೋವೆರಾ ಜೆಲ್ : ಅಲೋವೆರಾ ಆರೋಗ್ಯವನ್ನು ಕಾಪಾಡುವಲ್ಲಿಯೂ ಉಪಯುಕ್ತವಾಗಿದೆ. ಇದರಲ್ಲಿರುವ ಉರಿಯೂತ ಗುಣವು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಸ್ವಲ್ಪ ಅಲೋವೆರಾ ಜೆಲ್ ಅನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಒಡೆಯುವ ತುಟಿಗಳ ಸಮಸ್ಯೆಯಿಂದ ಪಾರಾಗಬಹುದು.
* ತುಪ್ಪ: ತುಪ್ಪದಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಚರ್ಮದ ಜೀವಕೋಶಗಳಿಗೆ ತೇವಾಂಶ ನೀಡುತ್ತವೆ. ಒಡೆದ ತುಟಿಗಳಿಗೆ ತುಪ್ಪವನ್ನು ಹಚ್ಚುತ್ತಾ ಬಂದರೆ ಬಿರುಕು ಬಿಡುವುದು ಬೇಗನೇ ಗುಣಮುಖವಾಗಿ, ತುಟಿಗಳನ್ನು ಮೃದುವಾಗಿಸುತ್ತದೆ.
* ತೆಂಗಿನೆಣ್ಣೆ : ತೆಂಗಿನ ಎಣ್ಣೆಯಲ್ಲಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ತಕ್ಷಣವೇ ಹೈಡ್ರೇಟ್ ಮಾಡುತ್ತದೆ. ತೆಂಗಿನೆಣ್ಣೆಯನ್ನು ದಿನನಿತ್ಯ ತುಟಿಗಳಿಗೆ ಲೇಪಿಸುವುದರಿಂದ ಸೋಂಕುಗಳಿಂದ ತುಟಿಗಳನ್ನು ರಕ್ಷಿಸಿ, ಮೃದುವಾಗಿಸುತ್ತದೆ.