ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್, ಮಹೇಂದ್ರ ಸಿಂಗ್ ಧೋನಿಯವರಂತೆ ಐಪಿಎಲ್‌ನಲ್ಲಿ ಐದು ಟ್ರೋಫಿಗಳನ್ನು ಗೆಲ್ಲುವುದೇ ತಮ್ಮ ಪ್ರಮುಖ ಗುರಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಐಪಿಎಲ್‌ನಲ್ಲಿ ಧೋನಿ ದಾಖಲಿಸಿದ್ದ ಒಟ್ಟು 5,439 ರನ್‌ಗಳ ಸಾಧನೆಯನ್ನು ರಾಹುಲ್ ಮೀರಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಧೋನಿ ಅವರ ದಾಖಲೆಯನ್ನು ಮುರಿದಿರುವುದರ ಬಗ್ಗೆ ಮೊದಲಿಗೆ ತಮಗೆ ತಿಳಿದಿರಲಿಲ್ಲ ಎಂದು ಹೇಳಿದರು.
ಮಹೀ ಭಾಯ್ ಅವರ ದಾಖಲೆಯನ್ನು ಮುರಿದಿದ್ದೇನೆ ಎಂಬ ಅರಿವು ನನಗೆ ಇರಲಿಲ್ಲ. ವೈಯಕ್ತಿಕ ದಾಖಲೆಗಳು ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ. ಆದರೆ ಧೋನಿಯವರಂತೆ ಐದು ಐಪಿಎಲ್ ಟ್ರೋಫಿಗಳನ್ನು ಗೆಲ್ಲುವುದು ನನಗೆ ಇನ್ನಷ್ಟು ಸಂತೋಷ ನೀಡುತ್ತದೆ ಎಂದು ರಾಹುಲ್ ತಿಳಿಸಿದ್ದಾರೆ.
ಕ್ರಿಕೆಟ್ ತಂಡದ ಆಟವಾಗಿದ್ದು, ವೈಯಕ್ತಿಕ ಸಾಧನೆಗಿಂತ ತಂಡದ ಯಶಸ್ಸಿಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿ ತಂಡದ ಗುರಿಯೂ ಟ್ರೋಫಿ ಗೆಲ್ಲುವುದೇ ಆಗಿರುತ್ತದೆ. ಅಂತಹ ತಂಡದ ಭಾಗವಾಗಿದ್ದು ಪ್ರಶಸ್ತಿ ಗೆಲ್ಲುವುದು ಆಟಗಾರನಿಗೆ ಅಪಾರ ತೃಪ್ತಿ ನೀಡುತ್ತದೆ. ಅದಕ್ಕಾಗಿ ಟ್ರೋಫಿ ಗೆಲ್ಲುವುದೇ ನನ್ನ ಪ್ರಮುಖ ಗುರಿ ಎಂದು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದೊಂದಿಗೆ ತಮ್ಮ ಭಾವನಾತ್ಮಕ ನಂಟನ್ನು ಹಂಚಿಕೊಂಡ ರಾಹುಲ್, ಅದು ನನ್ನ ತವರಿನ ಮೈದಾನ. ಅಲ್ಲಿನ ವಾತಾವರಣ ನನಗೆ ಸದಾ ವಿಶೇಷ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡುವುದು ಸಹ ಒಂದು ವಿಭಿನ್ನ ಅನುಭವ ಎಂದು ಹೇಳಿದ್ದಾರೆ.



