ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಅತ್ಯಂತ ಸುಶಿಕ್ಷಿತ ಮುಖ್ಯಮಂತ್ರಿಗಳಾಗಿದ್ದ ಡಾ. ಎಸ್.ಎಂ. ಕೃಷ್ಣ ಅವರು ನಿಧನರಾದುದು ನೋವಿನ ಸಂಗತಿ. ಅವರು ಮುಖ್ಯಮಂತ್ರಿಗಳಾಗಿ, ವಿದೇಶಾಂಗ ಸಚಿವರಾಗಿ ನಾಡು ಮತ್ತು ರಾಷ್ಟ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ್ದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ, ಸಾಮಾಜಿಕ ನ್ಯಾಯದ ಪರ ನಿಂತು ಜನಕಲ್ಯಾಣವನ್ನು ಸಾಧಿಸಿದ ಅವರು ಇಂದು ನಮ್ಮನ್ನು ಅಗಲಿದ್ದಾರೆ. ನಾಡು ಮತ್ತು ದೇಶಕ್ಕೆ ಇದು ತುಂಬಲಾಗದ ನಷ್ಟ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಸಕರಾಗಿ, ಲೋಕಸಭೆ-ರಾಜ್ಯಸಭೆಗಳ ಸದಸ್ಯರಾಗಿ ನಿರಂತರ ರಾಜಕಾರಣದಲ್ಲಿದ್ದ ಎಸ್.ಎಂ. ಕೃಷ್ಣ ಅವರು ನೆರೆಯ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಐಟಿಬಿಟಿ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು. ಸಾಹಿತ್ಯ, ಸಂಗೀತ, ಸಂಸ್ಕೃತಿ ಪ್ರಿಯರಾಗಿದ್ದ ಅವರು, ದೇಶ-ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದಿದ್ದ ಮಹಾನ್ ಸಾಧಕರಾಗಿದ್ದರು. ನಿಷ್ಕಳಂಕ ಚಾರಿತ್ರ್ಯ ಹೊಂದಿದ್ದ ಅಪ್ಪಟ ಪ್ರಬುದ್ಧ ರಾಜಕಾರಣಿ ಡಾ. ಎಸ್.ಎಂ. ಕೃಷ್ಣ ಅಭಿವೃದ್ಧಿಯ ಹರಿಕಾರರೆಂದೇ ಜನಮಾನಸದಲ್ಲಿ ಬಿಂಬಿತರಾಗಿದ್ದರು. ಕರ್ನಾಟಕದ ಜನ ಅವರನ್ನೆಂದೂ ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.



