ವಿಜಯಸಾಕ್ಷಿ ಸುದ್ದಿ, ಗದಗ: ಕೆಲ ಅಧಿಕಾರಿಗಳು, ಶಾಸಕರು ಹಾಗೂ ಸಚಿವರ ಮೂಲಕ ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿರುವುದರಿಂದ ವರ್ಗಾವಣೆ ವ್ಯವಸ್ಥೆಯೇ ದಂಧೆಯಾಗಿ ಮಾರ್ಪಟ್ಟಿದೆ ಎಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಕೆಲ ಇಲಾಖೆಗಳಲ್ಲಿ ಈಗಾಗಲೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳಲ್ಲೂ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಜಾರಿಗೊಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ವರ್ಗಾವಣೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆಯಿದೆ ಎಂದರು.
ರಾಜ್ಯದಲ್ಲಿ 3,000 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 180ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಸಾಧ್ಯತೆ ಇದೆ. ಬರ ಪರಿಹಾರ ಹಾಗೂ ಉದ್ಯೋಗ ಭರವಸೆ ಕಾರ್ಯಗಳಿಗೆ ಪ್ರತಿ ಜಿಲ್ಲೆಗೆ ಸುಮಾರು ₹500 ಕೋಟಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ ಕೇಂದ್ರ ಸರ್ಕಾರ ಸುಮಾರು ₹4.50 ಲಕ್ಷ ಕೋಟಿ ತೆರಿಗೆ ಪಡೆಯುತ್ತಿದ್ದು, ರಾಜ್ಯಕ್ಕೆ ಕೇವಲ ₹68 ಸಾವಿರ ಕೋಟಿಯಷ್ಟು ಮಾತ್ರ ವಾಪಸ್ ನೀಡುತ್ತಿದೆ. ಬರದಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರವು ರಾಜ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲ ಅಧಿಕಾರವೂ ಇರುವುದಿಲ್ಲ. ಶಾಸಕ ಎಚ್.ಕೆ. ಪಾಟೀಲ, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಲಹೆ ಪಡೆದು ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ಈವರೆಗೆ ಕಡಿಮೆ ಸಮಯ ಸಿಕ್ಕಿದೆ. ಆಗಸ್ಟ್ 30ರ ನಂತರ ಇಡೀ ದಿನ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.



