ತುಮಕೂರು: ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರದ ಮದ ನೆತ್ತಿಗೇರಿದ್ದು, ರಾಜ್ಯದಲ್ಲಿ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಕಿಡಿಕಾರಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಡಳಿತ ವೈಖರಿ ವಿರುದ್ಧ ಹರಿಹಾಯ್ದರು.
ಜನರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದು, ಬಡ ರೈತರನ್ನು ಬೀದಿಗೆ ತಳ್ಳಲಾಗುತ್ತಿದೆ. ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯಲ್ಲೇ ಡಿ.ಕೆ. ಶಿವಕುಮಾರ್ ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಮಾಡಲು ಕೈಹಾಕಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚುನಾಯಿತ ಸರ್ಕಾರ ಇದೆ ಎಂದೇ ಯಾರಿಗೂ ಅನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಫಾರಂ ನಂ.7 ನೆಪ ಮಾಡಿಕೊಂಡು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಎಫ್‌ಐಆರ್ ಹಾಕಲಾಗಿದೆ. ಅಷ್ಟೇ ಅಲ್ಲದೆ, ವೀರಶೈವ ಲಿಂಗಾಯತ ಸ್ವಾಮೀಜಿಗಳ ಸಭೆಯಲ್ಲಿ ‘ಮೂರು ಸಾವಿರವೋ, ಆರು ಸಾವಿರವೋ ಮಠ’ ಎಂದು ಹಗುರವಾಗಿ ಮಾತನಾಡುವ ಮೂಲಕ ಪೂಜ್ಯ ಸ್ವಾಮೀಜಿಗಳಿಗೆ ಅವಮಾನ ಮಾಡಲಾಗಿದೆ. ಈ ಸರ್ಕಾರದ ಮದ ಇಳಿಸಲು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದ ಅನುದಾನಕ್ಕೆ ಕಾಯುತ್ತಿರುವ ಸರ್ಕಾರ, ಅತ್ಯಂತ ಕನಿಷ್ಠ ಬರ ಪರಿಹಾರ ಘೋಷಿಸಿದೆ. ನಾವು ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದೇವೆ. ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಪೊಲೀಸರು ಹಾಗೂ ನೀರಾವರಿ ಇಲಾಖೆ ನೌಕರರಿಗೆ ಸಂಬಳ ಕೊಡಲೂ ಹಣವಿಲ್ಲದಂತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸುವುದು ನಮ್ಮ ರಾಷ್ಟ್ರೀಯ ನಾಯಕರ ಅಪೇಕ್ಷೆಯಾಗಿದೆ. ಈ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಈಗಲೇ ಇತ್ಯರ್ಥಪಡಿಸಿಕೊಂಡರೆ ಕಾರ್ಯಕರ್ತರಿಗೆ ಅನುಕೂಲವಾಗಲಿದೆ. ಕುಮಾರಸ್ವಾಮಿ ಅವರೂ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.



