ಲಕ್ಕುಂಡಿ: ಕರ್ನಾಟಕ ಇರೋಲೊಜಿಸ್ಟ್ ಅಸೋಸಿಯೇಷನ್‌ನ ಸುಮಾರು 200ಕ್ಕೂ ಹೆಚ್ಚು ವೈದ್ಯರು ಐತಿಹಾಸಿಕ ಲಕ್ಕುಂಡಿಗೆ ಭೇಟಿ ನೀಡಿ, ಇಲ್ಲಿನ ಅಪೂರ್ವ ಶಿಲ್ಪಕಲೆ, ದೇವಾಲಯಗಳ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಕುಂಡಿಯ ವಿವಿಧ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದ ವೈದ್ಯರು, ಹೊಯ್ಸಳ ಮತ್ತು ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಶಿಷ್ಟ್ಯ, ಕಲ್ಲಿನಲ್ಲಿ ಮೂಡಿಬಂದಿರುವ ಸೂಕ್ಷ್ಮ ಕೆತ್ತನೆಗಳು ಹಾಗೂ ದೇವಾಲಯಗಳ ವಾಸ್ತುಶಿಲ್ಪವನ್ನು ಕುತೂಹಲದಿಂದ ವೀಕ್ಷಿಸಿದರು. ಶಿಲ್ಪಿಗಳ ಕಲಾನೈಪುಣ್ಯ ಮತ್ತು ಶತಮಾನಗಳ ಹಿಂದೆಯೇ ನಿರ್ಮಿಸಲಾಗಿರುವ ಈ ಸ್ಮಾರಕಗಳ ಕಲಾತ್ಮಕ ವೈಭವ ವೈದ್ಯರನ್ನು ವಿಶೇಷವಾಗಿ ಆಕರ್ಷಿಸಿತು.
ಲಕ್ಕುಂಡಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿಯುವ ನಿಟ್ಟಿನಲ್ಲಿ ವೈದ್ಯರ ಈ ಭೇಟಿ ಮಹತ್ವ ಪಡೆದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವೈದ್ಯರು ಲಕ್ಕುಂಡಿಯ ಶಿಲ್ಪಸಂಪತ್ತನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇಲ್ಲಿನ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ವೈದ್ಯರ ತಂಡದ ಈ ಭೇಟಿ ಲಕ್ಕುಂಡಿಯ ಐತಿಹಾಸಿಕ ವೈಭವ ಮತ್ತು ಶಿಲ್ಪಕಲೆಯ ಮಹತ್ವವನ್ನು ಮತ್ತಷ್ಟು ಜನರಿಗೆ ಪರಿಚಯಿಸುವಲ್ಲಿ ಸಹಕಾರಿಯಾಗಲಿದೆ.



