ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿ ನೂರಾರು ದಿನ ಜೈಲಿನಲ್ಲಿ ಕಾಲ ಕಳೆದಿದ್ದ ನಟ ದರ್ಶನ್ ಅವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ದರ್ಶನ್ ಹಾಗೂ ಅವರ ಗ್ಯಾಂಗ್‌ನ 6 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೀಗ ದರ್ಶನ್ಗೆ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶವಾಯು ಆಗುತ್ತದೆ ಎಂದು ವೈದ್ಯರು ವರದಿ ನೀಡಿದ್ದರು. ಇದೇ ವರದಿ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದರು. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲಿಯೇ ಇದ್ದರು.
ಈಗ ಜಾಮೀನು ಸಿಗುತ್ತಿದ್ದಂತೆ ಅವರು ಸಂಪೂರ್ಣವಾಗಿ ಗುಣಮುಖರಾದಂತೆ ಕಾಣಿಸುತ್ತಿದೆ. ಅವರು ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಇಂದು ಬೌನ್ಸರ್ ಹಾಗೂ ಕುಟುಂಬ ಸದಸ್ಯರ ಜೊತೆ ದರ್ಶನ್ ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ದರ್ಶನ್ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ‘ಬಿಪಿ ಕಾರಣಕ್ಕೆ ಶಸ್ತ್ರಚಿಕಿತ್ಸೆ ಆಗಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಈಗ ದರ್ಶನ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.



