ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಹುಬ್ಬಳ್ಳಿ ಕೋರ್ಟ್ ವೃತ್ತದಿಂದ ನಿರ್ಮಾಣವಾಗುತ್ತಿರುವ ಫ್ಲೈಓವರನ್ನು ದೇಸಾಯಿ ಕ್ರಾಸ್‌ವರೆಗೆ ಮುಂದುವರೆಸುವ ಅಥವಾ ಪ್ರಸ್ತುತ ಅಲ್ಲಿರುವ ಅಂಡರ್‌ಪಾಸನ್ನು ತೆಗೆದು ಹಾಕಿ ಈ ಹಿಂದೆ ಇದ್ದ ರಸ್ತೆಯನ್ನು ನಿರ್ಮಾಣ ಮಾಡುವ ಕುರಿತು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ.18ರಂದು ಸಭೆ ನಡೆಯಿತು.
ಫ್ಲೈಓವರ್ ನಿರ್ಮಾಣದ ಪ್ರಾತ್ಯಕ್ಷಿಕೆ ವೀಕ್ಷಣೆ ವೇಳೆ ಮಾತನಾಡಿದ ಹೊರಟ್ಟಿಯವರು, ರಸ್ತೆ ವ್ಯವಸ್ಥೆ ಸರಿಯಾಗಿಲ್ಲದೇ ಈ ಪ್ರದೇಶದ ಜನರು ಹೈರಾಣಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಇಂಜಿನಿಯರ್ ಗಮನ ಹರಿಸಬೇಕು ಎಂದು ತಿಳಿಸಿದರು.
ಚನ್ನಮ್ಮ ಸರ್ಕಲ್, ಕೋರ್ಟ್ ವೃತ್ತದಿಂದ ಸರ್ಕೀಟ್ ಹೌಸ್ ಮತ್ತು ರೈಲ್ವೆ ಸೇತುವೆ ಬಳಸಿ ಕೇಶ್ವಾಪುರಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಫ್ಲೈಓವರ್ ಅಗತ್ಯವಿದೆಯೇ ಎಂಬುದರ ಬಗ್ಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಯೋಚಿಸಿ ನಿರ್ಣಯಿಸಬೇಕು. ಫ್ಲೈಓವರ್ ನಿರ್ಮಾಣವಾಗಲೇಬೇಕು ಎಂದಾದಲ್ಲಿ ಇದರಿಂದಾಗುವ ಸಾಧಕ-ಬಾಧಕಗಳ ಬಗ್ಗೆ ಸರಿಯಾಗಿ ಅರಿಯಬೇಕು. ಅಥವಾ ಫ್ಲೈಓವರ್ ಬದಲಿಗೆ ಪ್ರಸ್ತುತ ಅಲ್ಲಿರುವ ಅಂಡರ್‌ಪಾಸನ್ನು ತೆಗೆದುಹಾಕಿ ಈ ಹಿಂದೆ ಇದ್ದ ರಸ್ತೆಯನ್ನು ನಿರ್ಮಾಣ ಮಾಡುವುದು ಸೂಕ್ತ ಎಂದಾದಲ್ಲಿ ಈ ಬಗ್ಗೆ ಪರಿಷ್ಕೃತ ಪ್ರಸ್ತಾವನೆಯನ್ನು ಬರುವ ಜನವರಿ ಅಂತ್ಯಕ್ಕೆ ಸಲ್ಲಿಸಬೇಕು ಎಂದು ಹೊರಟ್ಟಿಯವರು ಅಧಿಕಾರಿಗಳು ಮತ್ತು ಇಂಜಿನಿಯರುಗಳಿಗೆ ಗಡುವು ವಿಧಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕಾರ್ಯದರ್ಶಿ ಸತ್ಯನಾರಾಯಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು, ರಾಷ್ಟ್ರೀಯ ಹೆದ್ದಾರಿ ಉತ್ತರ ವಲಯದ ಮುಖ್ಯ ಇಂಜನಿಯರ್, ಸಂಪರ್ಕ ಮತ್ತು ಕಟ್ಟಡದ ಮುಖ್ಯ ಇಂಜಿನಿಯರ್, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಮಹೇಶ ವಾಳ್ವೇಕರ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿಗಳ ವೃತ್ತದ ಅಧೀಕ್ಷಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಇನ್ನಿತರರು ಇದ್ದರು.



